ಚಿಕ್ಕೋಡಿ (ಬೆಳಗಾವಿ) : ಕರ್ನಾಟಕದ ಲಾರಿ ಚಾಲಕನೊಬ್ಬನ ಮೇಲೆ ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಆನೇವಾಡಿ ಟೋಲ್ ಗೇಟ್ ಬಳಿ ಶುಕ್ರವಾರ ರಾತ್ರಿ ಮರಾಠಿಯಲ್ಲಿ ಮಾತನಾಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದ ನಾಲ್ವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ತಾಲೂಕಿನ ಶಿರಾ ಮೂಲದ ಗೋವಿಂದ್‌ರಾಜು ಹಲ್ಲೆಗೊಳಗಾದ ಲಾರಿ ಚಾಲಕ. ಹಲ್ಲೆ ಬಗ್ಗೆ ಈತನ ಬಳಿ ಮಾಹಿತಿ ಪಡೆದ ಬೆಳಗಾವಿ ಜಿಲ್ಲಾ ಪೊಲೀಸರು ಪ್ರಕರಣ ಕುರಿತು ಸಾತಾರ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅಲ್ಲದೆ, ನಿಪ್ಪಾಣಿ ಪೊಲೀಸ್ ಠಾಣೆಯ ಪಿಎಸ್‌ಐ ಅವರೊಂದಿಗೆ ಸಾತಾರ ಜಿಲ್ಲೆಯ ಭೂಂಜ್ ಪೊಲೀಸ್ ಠಾಣೆಗೆ ತೆರಳಿದ್ದ ಚಾಲಕ ಗೋವಿಂದ್‌ರಾಜು ಹಲ್ಲೆಕೋರರ ವಿರುದ್ಧ ದೂರು ದಾಖಲಿಸಿದ್ದರು. ತಕ್ಷಣ ಕಾರ್ಯಾಚರಣೆ ನಡೆಸಿದ ಭೂಂಜ್ ಠಾಣೆ ಪೊಲೀಸರು ಹಲ್ಲೆ ನಡೆಸಿದ ನಾಲ್ವರನ್ನು ಬಂಧಿಸಿದ್ದಾರೆ.