ಬೆಳಗಾವಿ: ಪರಿಷತ್ ಸೋಲಿನ ಬಳಿಕ ಮೊದಲ ಬಾರಿಗೆ ಮಾತನಾಡಿದ ಮಹಾಂತೇಶ್ ಕವಟಗಿಮಠ, ತಮ್ಮ ಸೋಲಿಗೆ ಯಾವುದೇ ಒಳ ಒಪ್ಪಂದ ಕಾರಣವಲ್ಲ ಎಂದು ತಿಳಿಸಿದರು. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಇನ್ನೊಂದು ಪಕ್ಷದ ಜೊತೆ ಮಾತನಾಡುವ ಅಗತ್ಯ ಇಲ್ಲ. ಎಲ್ಲ ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ರಾಜ್ಯದದಲ್ಲಿ ಅತ್ಯಂತ ದೊಡ್ಡ ಜಿಲ್ಲೆ ಬೆಳಗಾವಿ. ಪಕ್ಷ ನನಗೆ ಅವಕಾಶ ಮಾಡಿಕೊಟ್ಟಿತ್ತು. ಪಕ್ಷವನ್ನು ಬೆಂಬಲಿಸಿದ ಸ್ಥಳೀಯ ನಾಯಕರಿಗೆ, ಜನತೆಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಎರಡು ಅವಧಿಯಲ್ಲಿ ಕೆಲಸ ಮಾಡಿದ ತೃಪ್ತಿ ನನಗಿದೆ. ಎರಡು ವರ್ಷ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ನಮಗೆ ಜಯ ಬಂದಿಲ್ಲ. ಆದರೆ, ಹೋರಾಟ ನಿರಂತರವಾಗಿರುತ್ತದೆ. ಪಕ್ಷ ಕೊಡುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ತಿಳಿಸಿದರು.
ಬೆಳಗಾವಿ ಸೋಲಿನ ಬಗ್ಗೆ ತನಿಖೆಯಾಗಬೇಕು ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರ ಪಕ್ಷದ ಆಂತರಿಕ ವಿಷಯ ಎಂದರು. ಬೆಳಗಾವಿ ಸೋಲಿಗೆ ಕಾರ್ಯಕರ್ತರು ಕಾರಣ ಎಂಬ ಸಚಿವ ಈಶ್ವರಪ್ಪರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಕಾರ್ಯಕರ್ತರನ್ನು ದೂಷಿಸಲು ಆಗುವುದಿಲ್ಲ. ಈ ಬಗ್ಗೆ ಆಂತರಿಕವಾಗಿ ಚರ್ಚೆ ನಡೆಯಲಿ ಎಂದು ತಿಳಿಸಿದರು.
(ಇದನ್ನೂ ಓದಿ: ನೋ ಕಮೆಂಟ್ಸ್, ಬಿಸಿಸಿಐ ಸೂಕ್ತ ರೀತಿಯಲ್ಲಿ ಇದನ್ನು ಡೀಲ್ ಮಾಡಲಿದೆ: ಕೊಹ್ಲಿ ಹೇಳಿಕೆಗೆ ಗಂಗೂಲಿ ಪ್ರತಿಕ್ರಿಯೆ)