ಬೆಳಗಾವಿ: ಕೋವಿಡ್ ನಿಯಂತ್ರಣ ವಿಚಾರದಲ್ಲಿ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಲೀಗಲ್ ನೋಟಿಸ್ ನೀಡಲು ಸಿಎಂ ಯಡಿಯೂರಪ್ಪನವರು ತಯಾರಿ ನಡೆಸಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಈ ಕುರಿತು ಈಗಾಗಲೇ ನಮ್ಮ 5 ಮಂತ್ರಿಗಳು ಸ್ಪಷ್ಟೀಕರಣ ಕೊಟ್ಟಿದ್ದಾರೆ. ನಾನು ಮತ್ತೆ ಅದರ ಬಗ್ಗೆ ಹೇಳೋದು ಸರಿಯಲ್ಲ. ಸಿಎಂ ಅವರೇ ಸಿದ್ದರಾಮಯ್ಯ ಅವರಿಗೆ ಲೀಗಲ್ ನೋಟಿಸ್ ಕೊಡಲಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳೇ ಮಾಹಿತಿ ನೀಡಲಿದ್ದಾರೆ ಎಂದರು.
ಬಿಮ್ಸ್ ಎದುರು ಆ್ಯಂಬುಲೆನ್ಸ್‌ಗೆ ಬೆಂಕಿ ಹಚ್ಚಿ ಕಲ್ಲು ತೂರಿದ ಘಟನೆ ಬಗ್ಗೆ ಸಿಎಂ ಜೊತೆ ಚರ್ಚಿಸಿದ್ದೇನೆ. ಇದನ್ನು ಸರ್ಕಾರ ಸೀರಿಯಸ್ ಆಗಿ ಪರಿಗಣಿಸಿದೆ. ಎರಡ್ಮೂರು ದಿನಗಳಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ. ಕೊರೊನಾ ಬಗ್ಗೆ ಜನರು ಪ್ಯಾನಿಕ್ ಆಗುವ ಅವಶ್ಯಕತೆ ಇಲ್ಲ. ಜುಲೈ, ಅಗಸ್ಟ್ ಬಳಿಕ ಕೊರೊನಾ ಮತ್ತೆ ಕಂಟ್ರೋಲ್ಗೆ ಬರೋ ಆಶಾಭಾವನೆ ಇದೆ. ಬಿಮ್ಸ್ ಬಗ್ಗೆ ಮತ್ತೆ ಸೋಮವಾರ ಸಭೆ ಕರೆದು ಚರ್ಚಿಸಿ, ವ್ಯವಸ್ಥೆ ಸರಿಪಡಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಬೆಂಗಳೂರಿನ ನನ್ನ ನಿವಾಸದಲ್ಲಿ ಕಳೆದ ರಾತ್ರಿ ಯಾವುದೇ ಸಭೆ ನಡೆಸಿಲ್ಲ. ಹೆಚ್ ವಿಶ್ವನಾಥ್ ಪರಿಷತ್ ಸದಸ್ಯರಾಗಿದ್ದಕ್ಕೆ ಸಂತೋಷವಾಗಿದೆ. ಸಂಪುಟ ವಿಸ್ತರಣೆ ಪರಮಾಧಿಕಾರ ಸಿಎಂಗೆ ಇದೆ. ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನು ಬಿಡಬೇಕು ಎಂಬುವುದನ್ನು ಹೈಕಮಾಂಡ್ ನಿರ್ಧರಿಸಲಿದೆ. ಅದರ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದರು.