ಬೆಳಗಾವಿ: ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ ಉದ್ವಿಗ್ನ ಹಂತಕ್ಕೆ ತಲುಪಿದ್ದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಡಾ. ಅಮರಕುಮಾರ್ ಪಾಂಡೆ ಅಖಾಡಕ್ಕೆ ಇಳಿದಿದ್ದಾರೆ.
ಬೆಂಗಳೂರಿನಿಂದ ಸಾಂಬ್ರಾ ನಿಲ್ದಾಣಕ್ಕೆ ಆಗಮಿಸಿದ ಅವರು ನೇರವಾಗಿ ಪೀರನವಾಡಿಯ ಸಂಗೊಳ್ಳಿ ರಾಯಣ್ಣ ಪುತ್ಥಳಿಯ ಸ್ಥಳಕ್ಕೆ ಭೇಟಿ ನೀಡಿದರು. ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಪುತ್ಥಳಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆ ಬಗ್ಗೆ ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ಅವರಿಂದ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಡಿಜಿಪಿ ಪಾಂಡೆ, ಕಾನೂನು ಸುವ್ಯವಸ್ಥೆ ಕಾಪಾಡಲು ಬೆಳಗಾವಿಗೆ ಬಂದಿದ್ದೇನೆ. ವಿವಾದ ಸಂಬಂಧ ಈವರೆಗೆ ಮೂರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕನ್ನಡ, ಮರಾಠಿ ಭಾಷಿಕರೆಂದು ನಾವು ನೋಡಲ್ಲ.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಪ್ರಕರಣ ಸಂಬಂಧ ನಗರ ಪೊಲೀಸ್ ಅಧಿಕಾರಿಗಳ ಜತೆಗೆ ಸಭೆ ನಡೆಸುತ್ತೇನೆ. ಜನರ ಭಾವನೆಗಳ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸುತ್ತೇನೆ. ಬೆಳಗ್ಗೆ ಕಾನೂನು ಸುವ್ಯವಸ್ಥೆ ಬಗ್ಗೆ ಗೊಂದಲ ಆಗಿದ್ದು, ಸದ್ಯ ಹತೋಟಿಗೆ ಬಂದಿದೆ. ಪೊಲೀಸ್ ವೈಫಲ್ಯ ಬಗ್ಗೆಯೂ ಸಭೆಯಲ್ಲಿ ಮಾಹಿತಿ ಪಡೆಯುತ್ತೇವೆ. ಹಾಗೇನಾದರೂ ಕಂಡು ಬಂದ್ರೆ ಕ್ರಮ ಜರುಗಿಸುತ್ತೇನೆ ಎಂದರು.