ಬೆಳಗಾವಿ: ಕೂಡಲಸಂಗಮದ ಪೀಠಾಧಿಪತಿ ಜಯಮೃತ್ಯುಂಜಯ ಸ್ವಾಮೀಜಿಗಳ ಬಗ್ಗೆ ಮುರುಗೇಶ್ ನಿರಾಣಿ ಹಗುರವಾಗಿ ಮಾತನಾಡಬಾರದು. ಅವರೇನು ತಮ್ಮ ಸ್ವಂತ ಮನೆಗೆ ಅಥವಾ ತಮ್ಮ ಸ್ವಾರ್ಥಕ್ಕೆ ಹೋರಾಟ ಮಾಡುತ್ತಿಲ್ಲ. ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಒಳ್ಳೆಯದಾಗಲಿ ಎಂದು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಲಿಂಗಾಯತ ಸಮುದಾಯದ ಮುಖಂಡರು, ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿರುವ 2ಎ ಮೀಸಲಾತಿ ಹೋರಾಟ ಕಾಂಗ್ರೆಸ್ನ ಪ್ರಾಯೋಜಕತ್ವದಲ್ಲಿ ನಡೆಯುತ್ತಿಲ್ಲ. ಇದು ತಪ್ಪು ಕಲ್ಪನೆ. ಮುರುಗೇಶ ನಿರಾಣಿಯವರ ಆರೋಪ ಸತ್ಯಕ್ಕೆ ದೂರವಾಗಿದೆ. ಮೀಸಲಾತಿ ಹೋರಾಟ ಪಕ್ಷಾತೀತವಾಗಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
ಈ ಮೊದಲು ಸಚಿವ ಮುರುಗೇಶ ನಿರಾಣಿಯವರೇ ಬಿಜೆಪಿಯಲ್ಲಿದ್ದುಕೊಂಡು ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡಿದ್ದರು. ಸಮಾಜದ ಪ್ರತಿಯೊಂದು ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತಾ ಭಾಗಿಯಾಗುತ್ತಿದ್ದ ಹಿರಿಯಣ್ಣನಂತಿರುವ ಮುರುಗೇಶ ನಿರಾಣಿಯವರು ಇದೀಗ ಸ್ವಾಮೀಜಿಗಳ ಬಗ್ಗೆ ಇಂತಹದೊಂದು ಆರೋಪ ಮಾಡುವುದು ಸರಿಯಲ್ಲ. ಸ್ವಾಮೀಜಿಗಳು ಸಮುದಾಯದ ಏಳಿಗೆಗಾಗಿ ಹೋರಾಟ ಮಾಡುತ್ತಿದ್ದಾರೆ. ಲಿಂಗಾಯತ ಸಮಾಜಕ್ಕೆ ಅವರು ಕಿರೀಟವಿದ್ದಂತೆ. ಕುರುಬ, ವಾಲ್ಮೀಕಿ ಸೇರಿದಂತೆ ಇತರೆ ಸಮಾಜದಲ್ಲಿರುವ ಸ್ವಾಮೀಜಿಗಳಿಗೆ ನಾವು ಗುರುವಿನ ಸ್ಥಾನವನ್ನು ಕೊಟ್ಟಿದ್ದೇವೆ. ಹೀಗಾಗಿ ಗುರುಗಳ ಬಗ್ಗೆ ಈ ರೀತಿ ಹಗುರವಾಗಿ ಮಾತನಾಡಬಾರದು ಎಂದರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹಿಡಿತದಲ್ಲಿ ಸ್ವಾಮೀಜಿಗಳಿದ್ದಾರೆ ಎಂಬ ಮುರುಗೇಶ ನಿರಾಣಿ ಹೇಳಿಕೆಗೆ, ಯಾರ ಕಪಿಮುಷ್ಟಿಯಲ್ಲಿಯೂ ಸ್ವಾಮೀಜಿಗಳಿಲ್ಲ. ಸಮಾಜದ ಕಟ್ಟಕಡೆಯ ಜನರಿಗೂ ಶೈಕ್ಷಣಿಕ, ಸಾಮಾಜಿಕ ಮೀಸಲಾತಿ ಸಿಗಲಿ ಎಂದು ಹೋರಾಟ ಮಾಡಲಾಗುತ್ತಿದೆ. ಲಿಂಗಾಯತ ಮೀಸಲಾತಿ ಹೋರಾಟವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಅಂತಹ ಕೆಲಸ ಮಾಡಬಾರದು ಎಂದು ಹೆಬ್ಬಾಳ್ಕರ್ ಮನವಿ ಮಾಡಿದರು.
ಮಾಜಿ ಸಿಎಂ ಸಿದ್ದರಾಮಯ್ಯನವರು ಜನಸಾಮಾನ್ಯರ ಬಗ್ಗೆ ಉನ್ನತ ವಿಚಾರಗಳನ್ನು ಇಟ್ಟುಕೊಂಡು ತನ್ನೂರಲ್ಲಿ ರಾಮಮಂದಿರ ನಿರ್ಮಿಸುತ್ತೇನೆ ಎಂಬ ಮಾತನ್ನು ಹೇಳಿದ್ದರು. ಆದ್ರೆ, ಬಿಜೆಪಿಯವರು ಅದನ್ನು ಕೂಡ ಧರ್ಮದ ರಾಜಕಾರಣಕ್ಕೆ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಲಿಂಗಾಯತ ಸಮುದಾಯಕ್ಕೆ 2ಎಮೀಸಲಾತಿ ನೀಡುವಂತೆ ಹೋರಾಟದ ಮೂಲಕ ಪ್ರಯತ್ನಿಸಲಾಗುತ್ತಿದ್ದು, ರಾಜ್ಯದ ಮುಖ್ಯಮಂತ್ರಿಗಳು ಮೀಸಲಾತಿ ನೀಡುತ್ತಾರೆ ಎಂದು ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದರು.
ಲಿಂಗಾಯತ ಸಮುದಾಯಲ್ಲಿ ಒಗ್ಗಟ್ಟು ಇಲ್ಲ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಆ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಆದ್ರೆ ನಮ್ಮ ಪಂಚಮಸಾಲಿ ಸಮುದಾಯದಲ್ಲಿ ಒಗ್ಗಟ್ಟು ಇದೆ. ವಿಚಾರಧಾರೆಗಳು ಬೇರೆ ಬೇರೆಯಾಗಿವೆಯಷ್ಟೇ. ಸರ್ಕಾರದ ಒಳಗಡೆ ಇರುವವರಿಗೆ ಅನೇಕ ಒತ್ತಡಗಳಿರಬಹುದು. ಯಾರ ಒತ್ತಡ ಅಂತಾ ನನಗೆ ಗೊತ್ತಿಲ್ಲ. ನಿರಾಣಿ ಅವರನ್ನು ಕೇಳಿದ್ರೆ ಎಲ್ಲವೂ ಗೊತ್ತಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಬಸವ ಜಯಂತಿ ಆಚರಿಸುವ ಸಂದರ್ಭದಲ್ಲಿ ಮೀಸಲಾತಿ ಹೋರಾಟದ ಬಗ್ಗೆ ಘೋಷಣೆ ಮಾಡಿದ್ರು. ಕಳೆದ 38 ದಿನಗಳಿಂದ ನಡೆಯುತ್ತಿರುವ ಸುದೀರ್ಘ ಪಾದಯಾತ್ರೆಯಲ್ಲಿ ನಾನು ಕೂಡ ಮೂರು ದಿನ ಭಾಗಿಯಾಗಿದ್ದೆ. ಆದ್ರೆ, ವಿಜಯಾನಂದ ಕಾಶಪ್ಪನವರ ಕುಟುಂಬ ಸಮೇತರಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷದಿಂದ ಮಾಡಿಲ್ಲ, ಸಮಾಜದಿಂದ ಮಾಡ್ತಿದ್ದಾರೆ. ಇದರಲ್ಲಿ ಯಾವುದೇ ಸ್ವಾಮೀಜಿಗಳ ಪಾತ್ರವಿಲ್ಲ ಎಂದು ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು.