ಬೆಳಗಾವಿ: ಕಳೆದ ವರ್ಷ ನಡೆದ ಗೋಕಾಕ್ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿ ಕಣಕ್ಕಿಳಿದಿದ್ದ ಲಖನ್ ಜಾರಕಿಹೊಳಿ ಮನೆಗಿಂದು ಬಿಜೆಪಿ ನಾಯಕರು ದಿಢೀರ್ ಭೇಟಿ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ.
ಗೋಕಾಕಿನ ಲಖನ್ ನಿವಾಸಕ್ಕೆ ಸಚಿವರಾದ ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ, ಸಚಿವೆ ಶಶಿಕಲಾ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಭೇಟಿ ನೀಡಿ ಬಿಜೆಪಿಗೆ ಆಹ್ವಾನಿಸಿದ್ದಾರೆ. ಸಹೋದರರಾದ ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಜೊತೆಗೆ ಚರ್ಚಿಸಿ ನಿರ್ಧರಿಸುವುದಾಗಿ ಬಿಜೆಪಿ ನಾಯಕರಿಗೆ ಲಖನ್ ತಿಳಿಸಿದ್ದಾರೆ.
ಲಖನ್ ಕೂಡ ಸತೀಶ್ ಜಾರಕಿಹೊಳಿ ಪರ ಪ್ರಚಾರಕ್ಕೆ ಹೋಗದೇ ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿ ಲಖನ್ ಬಿಜೆಪಿ ಸೇರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಚುನಾವಣೆ ಸಮಯದಲ್ಲಿ ಲಖನ್ ಬಿಜೆಪಿ ಸೇರುತ್ತಿರುವುದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ ದೊಡ್ಡ ಮಟ್ಟದ ಶಾಕ್ ಎಂದೇ ಹೇಳಲಾಗುತ್ತಿದೆ.
ಓದಿ-ಸಿಡಿ ಪ್ರಕರಣ: ಡಿಕೆಶಿ ರಾಜೀನಾಮೆಗೆ ಲಖನ್ ಜಾರಕಿಹೊಳಿ ಆಗ್ರಹ
ಕಾಂಗ್ರೆಸ್ ವಿರುದ್ಧ ಲಖನ್ ಆಕ್ರೋಶ
ಬಿಜೆಪಿ ನಾಯಕರ ಭೇಟಿಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಲಖನ್ ಜಾರಕಿಹೊಳಿ, ಕಾಂಗ್ರೆಸ್ ಹೈಕಮಾಂಡ್ ಕೇವಲ ದೆಹಲಿಯಲ್ಲಿಲ್ಲ. ಈಸ್ಟ್, ವೇಸ್ಟ್, ನಾರ್ಥ್ ಹಾಗೂ ಸೌಥ್ ಹೀಗೆ ಕಾಂಗ್ರೆಸ್ನಲ್ಲಿ ನಾಲ್ಕು ಹೈಕಮಾಂಡ್ಗಳು ಇದ್ದಾರೆ. ರಾಜ್ಯದ ಹೈಕಮಾಂಡ್ ಹೇಳಿದಕ್ಕೆ ಸತೀಶ್ ಜಾರಕಿಹೊಳಿ ಸ್ಪರ್ಧಿಸಿದ್ದಾರೆ. ಜಿಲ್ಲೆಯಲ್ಲಿ ಲಿಂಗಾಯತ ಘಟಾನುಘಟಿ ನಾಯಕರಿದ್ದರೂ ಸಹ ಸತೀಶ್ ಜಾರಕಿಹೊಳಿಯನ್ನ ಎಲೆಕ್ಷನ್ ಗೆ ನಿಲ್ಲಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಹೋದರರ ಜೊತೆ ಚರ್ಚಿಸುತ್ತೇನೆ
ಬಿಜೆಪಿ ಸೇರುವಂತೆ ನಾಯಕರು ಆಹ್ವಾನ ನೀಡಿದ್ದಾರೆ. ಸಹೋದರರ ಜೊತೆಗೆ ಚರ್ಚಿಸಿ ನಿರ್ಧಸುತ್ತೇನೆ. ಒಳ್ಳೆಯವರಿಗೆ ಕಾಂಗ್ರೆಸ್ನಲ್ಲಿ ಬೆಲೆ ಇಲ್ಲ. ಹೀಗಾಗಿ ಉಪಚುನಾವಣೆ ಫಲಿತಾಂಶದ ಬಳಿಕ ನಾನು ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡಿದ್ದೇನೆ. ಈಗ ಬಿಜೆಪಿ ನಾಯಕರು ಮನೆಗೆ ಬಂದು ಹೋಗಿದ್ದಾರೆ. ನಾನು ಕೂಡ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಜೊತೆಗೆ ಚರ್ಚಿಸುತ್ತೇನೆ. ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುತ್ತೇನೆ ಎಂದಿದ್ದಾರೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಲಖನ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಂತೆ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ ಕೆ ಶಿವಕುಮಾರ್ ಸಹ ರಾಜೀನಾಮೆ ಸಲ್ಲಿಸಲಿ ಎಂದು ಆಗ್ರಹಿಸಿದ್ದರು. ಆಗಲೇ ಕಾಂಗ್ರೆಸ್ ಮೇಲೆ ಲಖನ್ ಮುನಿಸಿಕೊಂಡಿರುವುದು ಬಹಿರಂಗವಾಗಿತ್ತು.