ಚಿಕ್ಕೋಡಿ: ಜಿಲ್ಲೆಯ ಸ್ವಯಂ ಘೋಷಿತ ಕಾಂಗ್ರೆಸ್ ನಾಯಕರು, ಬಿಜೆಪಿಯ ನಾಯಕರು ಹೋಟೆಲ್ನಲ್ಲಿ ಸಭೆ ನಡೆಸಿದ್ದಾರೆ. ಅವರವರೇ ಹೊಂದಾಣಿಕೆ ಮಾಡಿಕೊಂಡು ಈಗ ಬೇರೊಬ್ಬರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ವಿಜೇತ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದರು.
ಗೋಕಾಕ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ನಾಯಕರು ಕಾಂಗ್ರೆಸ್ನವರ ಜತೆ ಸೇರಿ ರಹಸ್ಯ ಸಭೆ ಮಾಡಿದ್ದರು. ಹೀಗಾಗಿ ಬಿಜೆಪಿ ಮತಗಳು ಕಾಂಗ್ರೆಸ್ಗೆ ಹೋದವು. ಕಾಂಗ್ರೆಸ್ಗೆ 2400 ಮತ, ನನಗೆ 3000, ಬಿಜೆಪಿಗೆ 3500 ಅಂತಾ ನಮ್ಮ ಲೆಕ್ಕಾಚಾರವಿತ್ತು. ಆದ್ರೆ, ಅವರವರೇ ಹೊಂದಾಣಿಕೆ ಮಾಡಿಕೊಂಡು ಈಗ ಬೇರೊಬ್ಬರ ಮೇಲೆ ಆರೋಪ ಮಾಡುತ್ತಿದ್ದಾರೆ ಎನ್ನುವ ಮೂಲಕ ಸಹೋದರ ರಮೇಶ್ ಬೆನ್ನಿಗೆ ಲಖನ್ ಜಾರಕಿಹೊಳಿ ನಿಂತಿದ್ದಾರೆ.
ಬಿಜೆಪಿ ಸೇರುವ ವಿಚಾರಕ್ಕೆ, ನಾನು ನಮ್ಮ ನಾಯಕರ ಜತೆಗೆ ಚರ್ಚೆ ಮಾಡುತ್ತೇನೆ. ರಮೇಶ್, ಬಾಲಚಂದ್ರ ನನ್ನ ಪರವಾಗಿ ಪ್ರಚಾರ ಮಾಡಿದ್ದರೆ, ನಾನು ಮೊದಲ ಪ್ರಾಶಸ್ತ್ಯದಲ್ಲೇ ಗೆಲ್ಲುತ್ತಿದ್ದೆ. ಅವರು ನಿಷ್ಠಾವಂತರಾಗಿ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದಾರೆ. ಕಳೆದ ಎಂಪಿ ಚುನಾವಣೆಯಲ್ಲಿ ರಮೇಶ್ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿದ್ದರು. ಹೀಗಾಗಿಯೇ ಅವರು ಗೆದ್ದರು ಎಂದರು.
ಆಗ ಇರದ ಮಾತುಗಳು ಈಗ್ಯಾಕೆ ಕೇಳಿ ಬರ್ತಿವೆ?. 13 ಜನ ಶಾಸಕರು, ಇಬ್ಬರು ಎಂಪಿ ಹಾಗೂ ಒಬ್ಬರು ರಾಜ್ಯಸಭೆ ಸದಸ್ಯರು ಇದ್ದಾರೆ. ಸೋತರೆ ರಮೇಶ್ ಮೇಲೆ, ಗೆದ್ದರೆ ಬಿಜೆಪಿ ಶಾಸಕರ ಮೇಲೆ ಹಾಕಿದರೆ ಯಾವ ಲೆಕ್ಕ ಎಂದು ಲಖನ್ ಪ್ರಶ್ನಿಸಿದರು.
ಜಿಲ್ಲೆಯಲ್ಲಿ ರಮೇಶ್ ಜಾರಕಿಹೊಳಿ ಇದ್ದರೆ ಸಂಘಟನೆ ಆಗೋದು. ಎಂಪಿ ಎಲೆಕ್ಷನ್ನಲ್ಲಿ ಮಂಗಳಾ ಅಂಗಡಿ ಗೆಲ್ಲಿಸಿದ್ದು, ರಮೇಶ್ ಅಂತಾ ಜಿಜೆಪಿಯವರೇ ಹೇಳ್ತಾರೆ. ನಮ್ಮನ್ನ ಗೆಲ್ಲಿಸಿದ್ದೂ ಸಹ ರಮೇಶ್ ಅಂತಾನೂ ಅವರೇ ಹೇಳುತ್ತಿದ್ದಾರೆ. ಹಾಗಾದ್ರೆ ರಮೇಶ್ ಬಿಜೆಪಿಯ ಎಲ್ಲರಿಗಿಂತ ಸ್ಟ್ರಾಂಗ್ ಎಂದಂತಾಯಿತಲ್ಲ. ಬಿಜೆಪಿ ರಾಜ್ಯ ನಾಯಕರಲ್ಲಿ ನಾನು ವಿನಂತಿ ಮಾಡುತ್ತೇನೆ. ಅವರ ಶಕ್ತಿಯನ್ನು ಬಿಜೆಪಿ ಬಳಸಿಕೊಳ್ಳಬೇಕು. ರಮೇಶ್ ಬೆಂಬಲಿಗರು, ರಾಜ್ಯಾದ್ಯಂತ ಅವರಿಗಿರುವ ಮತಗಳನ್ನು ಬಿಜೆಪಿ ಬಳಸಿಕೊಳ್ಳಬೇಕು. ಆ ಮೂಲಕ ನಿಮ್ಮ ಪಕ್ಷವನ್ನು (ಬಿಜೆಪಿ) ಅಧಿಕಾರಕ್ಕೆ ತನ್ನಿ ಎಂದು ಬಿಜೆಪಿ ನಾಯಕರಿಗೆ ಲಖನ್ ಸಲಹೆ ನೀಡಿದರು.