ಚಿಕ್ಕೋಡಿ: ಕೃಷ್ಣಾನದಿಯ ಮಹಾಪ್ರವಾಹಕ್ಕೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನದಿ ತೀರದ ಗ್ರಾಮಗಳ ಬಹುತೇಕ ಮನೆಗಳು ನೆಲಸಮವಾಗಿದ್ದು, ಇಲ್ಲಿರುವ ಜನರು ಬೀದಿಯಲ್ಲಿ ಜೀವನ ಸಾಗಿಸುವ ಸ್ಥಿತಿ ನಿರ್ಮಾಣವಾಗಿದೆ.
ಮಹಾ ಪ್ರವಾಹದ ರಭಸಕ್ಕೆ ಚಿಕ್ಕೋಡಿ ತಾಲೂಕಿನ ಯಡೂರ, ಕಲ್ಲೋಳ, ಮಾಂಜರಿ, ಅಂಕಲಿ, ಇಂಗಳಿ, ಭಾವನಸೌಂದತ್ತಿ ಸೇರಿದಂತೆ ನದಿ ತೀರದ ಬಹುತೇಕ ಗ್ರಾಮಗಳಿಗೆ ನೀರು ನುಗ್ಗಿದೆ. ಪರಿಣಾಮ ಮನೆಗಳು ನೆಲಸಮವಾಗಿ ಗ್ರಾಮಸ್ಥರು ಬೀದಿಯಲ್ಲಿ ಜೀವನ ಸಾಗಿಸುವ ಸ್ಥಿತಿ ನಿರ್ಮಾಣವಾಗಿದೆ.
ಕಷ್ಟಪಟ್ಟು ದುಡಿದು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂಬ ಉದ್ದೇಶದಿಂದ ನಿರ್ಮಿಸಿದ ಮನೆಗಳು ಕೃಷ್ಣೆಯ ಕೋಪಕ್ಕೆ ಬಿದ್ದುಹೋಗಿವೆ. ಕೆಲ ಮನೆಗಳಲ್ಲಿ ನೀರು ನುಗ್ಗಿ ಗೋಡೆಗಳು ಬಿರುಕು ಬಿಟ್ಟಿವೆ. ಇನ್ನು ಗೃಹೋಪಯೋಗಿ ವಸ್ತುಗಳಾದ ಟಿವಿ, ಪ್ರಿಡ್ಜ್, ಸೋಫಾ, ದವಸ-ಧಾನ್ಯಗಳು ಸೇರಿ ಮುಂತಾದ ವಸ್ತುಗಳು ಸಂಪೂರ್ಣ ನೀರಿಗೆ ಆಹುತಿಯಾಗಿವೆ. ಇದರಿಂದ ಜನರ ಬದುಕು ಬೀದಿಗೆ ಬಿದ್ದಂತಾಗಿದ್ದು, ಕಣ್ಣೀರು ಹಾಕುತ್ತಿದ್ದಾರೆ.
ನದಿ ತೀರದ ಜನ ಮನೆಗಳನ್ನು ಕಳೆದುಕೊಂಡು ಹತಾಶರಾಗಿದ್ದು, ಸರ್ಕಾರ ಯಾವಾಗ ನೆಲೆ ಕಳೆದುಕೊಂಡ ಸಂತ್ರಸ್ತರಿಗೆ ಯಾವಾಗ ಪರಿಹಾರ ಕಲ್ಪಿಸುತ್ತದೆಯೋ ನೋಡಬೇಕು.