ಬೆಳಗಾವಿ: ಕೋವಿಡ್ ಆತಂಕದಲ್ಲೇ ನಡೆದ 10 ದಿನಗಳ ಬೆಳಗಾವಿ ಅಧಿವೇಶನ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಬಾರಿಯ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕದ ಪ್ರತಿಧ್ವನಿ ಜೋರಾಗಿತ್ತು. ಈ ಮಧ್ಯೆ ಉತ್ತರ ಕರ್ನಾಟಕದ ಚರ್ಚೆ ಗೌಣವಾಯಿತು.
ಎರಡು ವರ್ಷಗಳ ಬಳಿಕ ನಡೆದ ಬೆಳಗಾವಿ ಅಧಿವೇಶನ ಪೂರ್ಣಗೊಂಡಿದೆ. ಕೋವಿಡ್ ಆತಂಕದಲ್ಲೇ ಬೆಳಗಾವಿ ಅಧಿವೇಶನ ನಡೆಸಲಾಗಿತ್ತು. ಈ ಬಾರಿಯ ಅಧಿವೇಶನದಲ್ಲೂ ಪ್ರತಿಪಕ್ಷ, ಆಡಳಿತ ಪಕ್ಷದ ನಡುವಿನ ಜಿದ್ದಾಜಿದ್ದಿಗೆ ವೇದಿಕೆಯಾಯಿತು. ಪ್ರತಿಭಟನೆ, ಸಭಾತ್ಯಾಗ, ಆರೋಪ - ಪ್ರತ್ಯಾರೋಪ, ಗದ್ದಲ, ವಾಕ್ಸಮರಕ್ಕೆ ಈ ಬಾರಿಯ ಕಲಾಪವೂ ಸಾಕ್ಷಿಯಾಯಿತು. ಅದರಲ್ಲೂ ಮತಾಂತರ ನಿಷೇಧ ವಿಧೇಯಕ ಗಲಾಟೆ ಈ ಬಾರಿಯ ಕಲಾಪದ ಪ್ರಮುಖ ಹೈಲೈಟ್ ಆಗಿದೆ. ಪ್ರತಿಪಕ್ಷಗಳ ವಿರೋಧ, ಗದ್ದಲದ ಮಧ್ಯೆ ಸರ್ಕಾರ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕವನ್ನು ಅಂಗೀಕರಿಸಿತು.
ಸುಮಾರು 52 ತಾಸುಗಳ ಕಾಲ ನಡೆದ ಬೆಳಗಾವಿ ಅಧಿವೇಶನದ ಕಲಾಪದಲ್ಲಿ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ, ಗದ್ದಲ, ವಾಕ್ಸಮರ ಏರ್ಪಟ್ಟಿತ್ತು. ಆದರೆ, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆದಿಲ್ಲ ಎಂದು ಆಡಳಿತರೂಢ ಪಕ್ಷದ ಶಾಸಕರೇ ಅಸಮಾಧಾನ ಹೊರ ಹಾಕಿದರು.
ಮತಾಂತರ, ಬೈರತಿ ವಿಚಾರಕ್ಕೆ ಉ.ಕರ್ನಾಟಕ ನಿರ್ಲಕ್ಷ್ಯ:
ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾದ ಬೆಳಗಾವಿ ಅಧಿವೇಶನದ ಬಗ್ಗೆ ಜನಪ್ರತಿನಿಧಿಗಳು ಈ ಬಾರಿಯೂ ದಿವ್ಯ ನಿರ್ಲಕ್ಷ್ಯ ತೋರಲಾಗಿದೆ. ಮತಾಂತರ ನಿಷೇಧ ವಿಧೇಯಕ ಹಾಗೂ ಸಚಿವ ಬೈರತಿ ಬಸವರಾಜು ಪ್ರಕರಣಕ್ಕೆ ಉತ್ತರ ಕರ್ನಾಟಕ ಚರ್ಚೆ ಬಲಿಯಾಯಿತು.
(ಇದನ್ನೂ ಓದಿ: ದೇಶದಲ್ಲಿ ದೊಡ್ಡ ರಾಜಕೀಯ ಅವಘಡ ಆಗಲಿದೆ: ಮತ್ತೊಮ್ಮೆ ಕೋಡಿಮಠ ಶ್ರೀ ಭವಿಷ್ಯ)
ಈ ಸಂಬಂಧ ಆಡಳಿತರೂಢ ಶಾಸಕರೇ ತೀವ್ರ ಅಸಮಾಧಾನ ಹೊರ ಹಾಕಿದರು. ಬಿಜೆಪಿ ಶಾಸಕ ಎ.ಎಸ್.ನಡಹಳ್ಳಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಉ.ಕರ್ನಾಟಕ ಭಾಗದ ಸಮಸ್ಯೆಗಳಿಗೆ ಚರ್ಚೆ ನಡೆಸಲು ಅವಕಾಶ ನೀಡದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಗೆ ಕಾಲಾವಕಾಶ ನೀಡದೇ ಇರುವುದು ಬೆಳಗಾವಿ ಅಧಿವೇಶನದ ಉದ್ದೇಶವೇ ವಿಫಲವಾಗಿದೆ ಎಂದು ಉ.ಕರ್ನಾಟಕ ಭಾಗದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗದ್ದಲದ ಬೆಳಗಾವಿ ಕಲಾಪ:
ಬೆಳಗಾವಿ ಅಧಿವೇಶನದಲ್ಲಿ ಎಂಇಎಸ್ ಪುಂಡಾಟಿಕೆಯ ಗದ್ದಲ ಜೋರಾಗಿತ್ತು. ಕಿಡಿಗೇಡಿಗಳು ನಡೆಸಿದ ದಾಂಧಲೆ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಯಿತು. ಈ ಸಂಬಂಧ ಜೆಡಿಎಸ್ ಸದಸ್ಯರು ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿ ಕನ್ನಡ ದನಿ ಎತ್ತಿದರು. ಈ ಸಂಬಂಧ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಎಂಇಎಸ್ ದುಷ್ಕತ್ಯವನ್ನು ಖಂಡಿಸಿ ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಅಂಗೀಕಾರ ಮಾಡಲಾಯಿತು. ಸುವರ್ಣ ವಿಧಾನಸೌಧದಲ್ಲಿ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ ಪ್ರತಿಮೆ ನಿರ್ಮಾಣದ ನಿರ್ಧಾರ ಕೈಗೊಳ್ಳಲಾಯಿತು.
(ಇದನ್ನೂ ಓದಿ: Watch... ಎತ್ತಿನಗಾಡಿನಲ್ಲಿ ಸಿಜೆಐ ಎನ್ವಿ ರಮಣ: ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ)
ರಮೇಶ್ ಕುಮಾರ್ ವಿವಾದಾತ್ಮಕ ಹೇಳಿಕೆಯ ಸದ್ದು:
ಅತ್ಯಾಚಾರ ಕುರಿತು ವಿಧಾನಸಭೆಯಲ್ಲಿ ರಮೇಶ್ ಕುಮಾರ್ ಆಕ್ಷೇಪಾರ್ಹ ಹೇಳಿಕೆ ಸದ್ದು ಮಾಡಿತ್ತು. ಕಾಂಗ್ರೆಸ್ಸಿಗರು ಸೇರಿದಂತೆ ಬಿಜೆಪಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸದನದಲ್ಲೇ ರಮೇಶ್ ಕುಮಾರ್ ಈ ಹೇಳಿಕೆಗಾಗಿ ಕ್ಷಮೆ ಕೋರಿದರು.
ವಿವಾದಿತ ಮತಾಂತರ ನಿಷೇಧ ವಿಧೇಯಕದ ಗದ್ದಲ:
ಅಧಿವೇಶನದಲ್ಲಿ ಈ ಬಾರಿ ಮತಾಂತರ ನಿಷೇಧ ವಿಧೇಯಕ ಜೋರಾಗಿ ಗದ್ದಲ ಮೂಡಿಸಿತು. ಪ್ರತಿಪಕ್ಷಗಳು ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಪ್ರತಿಪಕ್ಷಗಳ ತಂತ್ರಕ್ಕೆ ಆಡಳಿತ ಪಕ್ಷ ಪ್ರತಿತಂತ್ರ ರೂಪಿಸಿ, ವಿಧೇಯಕಕ್ಕೆ ಅಂಗೀಕಾರ ಪಡೆಯಿತು.
ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆದರೂ ಅಂಗೀಕಾರ ಪಡೆಯುವಲ್ಲಿ ಆಡಳಿತ ಪಕ್ಷ ಯಶಸ್ವಿಯಾಯಿತು. ವಿಧೇಯಕ ತಡೆಯಲು ಕಾಂಗ್ರೆಸ್ ವಿಫಲವಾಯಿತು. ಮತಾಂತರ ನಿಷೇಧ ವಿಧೇಯಕದ ವೇಳೆ ಬಿಜೆಪಿ ಮುಂದಿಟ್ಟ ಕಡತದಿಂದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮುಜುಗರಕ್ಕಿಡಾದರು. ಆಡಳಿತ ಪಕ್ಷ ತೋರಿಸಿದ ದಾಖಲೆಗಳಿಗೆ ಸಿದ್ದರಾಮಯ್ಯ ಉತ್ತರ ಕೊಡಲು ಸಾಧ್ಯವಾಗದೇ ಪರದಾಡಿದರು.
(ಇದನ್ನೂ ಓದಿ: ಹಳ್ಳ ಹಿಡೀತಾ ಲಕ್ಷ ಲಕ್ಷ ಖರ್ಚು ಮಾಡಿ ತೆರೆದ ಕೊರೊನಾ ಸಹಾಯವಾಣಿ..? ಬಿಬಿಎಂಪಿ ಸಹಾಯವಾಣಿಯೇ ಸ್ಥಗಿತ!)
ಸದನದಲ್ಲಿ ಬೈರತಿ ಪ್ರಕರಣದ ಗದ್ದಲ:
ಸದನದಲ್ಲಿ ಸಚಿವ ಬೈರತಿ ಬಸವರಾಜ್ ಮೇಲಿನ ಭೂ ಆರೋಪದ ಬಗ್ಗೆ ಕಾಂಗ್ರೆಸ್ ಕೋಲಾಹಲ ಎಬ್ಬಿಸಿತು. ಪರಿಷತ್ ಹಾಗೂ ವಿಧಾನಸಭೆಯಲ್ಲಿ ಬೈರತಿ ಪ್ರಕರಣ ಸಂಬಂಧ ವಿಷಯ ಪ್ರಸ್ತಾಪಿಸಿ, ಗದ್ದಲ ಉಂಟಾಯಿತು. ಸಚಿವ ಬೈರತಿ ಬಸವರಾಜು ರಾಜೀನಾಮೆಗೆ ಒತ್ತಾಯಿಸಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಎರಡು ದಿನ ಕಲಾಪಕ್ಕೆ ಬಂದು ಹೋದ ಹೆಚ್ಡಿಕೆ:
ಮೊದಲ ಒಂದು ವಾರ ಅಧಿವೇಶನಕ್ಕೆ ಗೈರಾದ ಮಾಜಿ ಸಿಎಂ ಕುಮಾರಸ್ವಾಮಿ ಕೇವಲ ಎರಡು ದಿನ ಕಲಾಪದಲ್ಲಿ ಪಾಲ್ಗೊಂಡು ವಾಪಸಾದರು. 10 ದಿನ ಕಲಾಪ ನಡೆದರೂ ಮಾಜಿ ಸಿಎಂ ಕುಮಾರಸ್ವಾಮಿ ಮಾತ್ರ ಕೇವಲ ಎರಡೇ ದಿನ ಕಲಾಪದಲ್ಲಿ ಭಾಗಿಯಾದರು. ಇದರಿಂದ ಪ್ರಮುಖ ಸಂದರ್ಭದಲ್ಲಿ ಸದನದಲ್ಲಿ ಜೆಡಿಎಸ್ ಸದಸ್ಯರು ನಾಯಕತ್ವದ ಕೊರತೆ ಎದುರಿಸುವಂತಾಯಿತು. ಕೇವಲ ಉ.ಕರ್ನಾಟಕದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ವಾಪಸಾದರು.
(ಇದನ್ನೂ ಓದಿ: ಮೊಬೈಲ್ನಲ್ಲಿ ವಿಡಿಯೋ ನೋಡಿ ನೇಣು ಹಾಕಿಕೊಂಡ 7ನೇ ಕ್ಲಾಸ್ ವಿದ್ಯಾರ್ಥಿ)
ಬೆಳಗಾವಿ ಅಧಿವೇಶನಕ್ಕೆ ಸದಸ್ಯರ ನಿರಾಸಕ್ತಿ:
ಬೆಳಗಾವಿ ಅಧಿವೇಶನಕ್ಕೆ ಶಾಸಕರ ನಿರಾಸಕ್ತಿ ಎದ್ದು ಕಂಡಿತು. ಮೊದಲ ವಾರದಲ್ಲಿ ಸುಮಾರು ಶೇ.65 ಹಾಜರಾತಿ ಇತ್ತು. ಒಟ್ಟು 10 ದಿನಗಳಲ್ಲಿ ಸುಮಾರು ಶೇ.73 ಹಾಜರಾತಿ ಇತ್ತು. ಎಂಟು ಸದಸ್ಯರು ಕಲಾಪಕ್ಕೆ ಪೂರ್ಣವಾಗಿ ಗೈರಾಗಿದ್ದಾರೆ.
ಆದರೆ ಬಹುತೇಕ ಶಾಸಕರು ಕಲಾಪಕ್ಕೆ ಹಾಜರಾತಿ ಕೊರತೆ ಎದ್ದು ಕಾಣುತ್ತಿತ್ತು. ಪ್ರಮುಖ ಚರ್ಚೆ ವೇಳೆ ಶಾಸಕರೇ ಗೈರಾಗುತ್ತಿರುವ ಬಗ್ಗೆ ಸ್ಪೀಕರ್ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಮುಖವಾಗಿ ರಮೇಶ್ ಜಾರಕಿಹೊಳಿ, ಮಾಜಿ ಸಿಎಂ ಕುಮಾರಸ್ವಾಮಿ ಅಧಿವೇಶನಕ್ಕೆ ಗೈರಾದ ಪ್ರಮುಖ ನಾಯಕರು. ಆ ಮೂಲಕ ಬೆಳಗಾವಿ ಅಧಿವೇಶನ ಸಂಬಂಧ ಶಾಸಕರ ನಿರಾಸಕ್ತಿ ಮತ್ತೆ ಮುನ್ನಲೆಗೆ ಬಂತು.
ಮಹತ್ವದ ವಿಧೇಯಕಗಳಿಗೆ ಅಸ್ತು:
ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕ ಸೇರಿ ಒಟ್ಟು 10 ಪ್ರಮುಖ ವಿಧೇಯಕಗಳು ಅಂಗೀಕೃತಗೊಂಡಿವೆ. ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ 2021, ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ 2021, ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿವಿ ವಿಧೇಯಕ 2021, ಕರ್ನಾಟಕ ಕೆಲವು ಇನಾಂ ಆಬಾಲಿಷನ್ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ 2021, ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿವಿ ವಿಧೇಯಕ ಸೇರಿ 10 ವಿಧೇಯಕಗಳು ಅಂಗೀಕಾರಗೊಂಡವು.
ಸದ್ದಾಗದ ಬಿಟ್ ಕಾಯಿನ್ ಹಾಗೂ ಶೇ.40 ಕಮಿಷನ್:
ಬೆಳಗಾವಿ ಅಧಿವೇಶನದಲ್ಲಿ ಬಿಟ್ ಕಾಯಿನ್ ಹಾಗೂ ಶೇ.40 ಕಮಿಷನ್ ಆರೋಪ ಪ್ರತಿಧ್ವನಿಸಲೇ ಇಲ್ಲ. ಅಧಿವೇಶನದಲ್ಲಿ ಪ್ರಮುಖವಾಗಿ ಬಿಟ್ ಕಾಯಿನ್ ಹಾಗೂ ಕಮಿಷನ್ ಆರೋಪವೇ ಸದ್ದು ಮಾಡುವ ನಿರೀಕ್ಷೆ ಇತ್ತು.
ಆದರೆ, ಕಾಂಗ್ರೆಸ್ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಲು ಹೆಚ್ಚಿನ ಆಸಕ್ತಿ ತೋರಿಲ್ಲ. ಕೊನೆಗೂ ಕಾಂಗ್ರೆಸ್ ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡಿಲ್ಲ. ಕೊನೆಯ ದಿನ ಶೇ.40 ವಿಚಾರವಾಗಿ ಸದನದಲ್ಲಿ ಪ್ರಸ್ತಾಪಿಸಲು ನಿಲುವಳಿ ನೋಟಿಸ್ ಕೊಟ್ಟರೂ ಅದನ್ನು ಚರ್ಚೆಗೆ ಕೈಗೆತ್ತಿಕೊಂಡಿಲ್ಲ.