ಬೆಳಗಾವಿ : ಚಳಿಗಾಲದ ಅಧಿವೇಶನ ಕೊನೆಯ ದಿನವಾದ ಇಂದು ವಿಧಾನಪರಿಷತ್‌ನಲ್ಲಿ ವಿವಿಧ ಪ್ರಮುಖ ಬೆಳವಣಿಗೆಗಳು ನಡೆಯುವ ನಿರೀಕ್ಷೆ ಇದೆ. ಈಗಾಗಲೇ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆ ಹಾಗೂ ಅತಿವೃಷ್ಟಿಯಿಂದ ಆಗಿರುವ ಹಾನಿಯ ಕುರಿತು ಸುದೀರ್ಘ ಚರ್ಚೆ ನಡೆಸಿರುವ ಪರಿಷತ್ ಸದಸ್ಯರು ಇಂದು ಇತರೆ ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಕಾಂಗ್ರೆಸ್ ಸದಸ್ಯ ಪಿ ಆರ್ ರಮೇಶ್ ಅವರು 40 ಪರ್ಸೆಂಟ್ ಕಮೀಷನ್ ವಿಚಾರವಾಗಿ ಸದನದಲ್ಲಿ ಚರ್ಚೆ ಮಂಡಿಸಿದ್ದು, ಇದಕ್ಕೆ ಸಚಿವರು ಉತ್ತರ ನೀಡಲಿದ್ದಾರೆ.
ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡವ ಸಾಧ್ಯತೆ : ನಿನ್ನೆಯೇ ಪರಿಷತ್‌ನಲ್ಲಿ ಕರ್ನಾಟಕ ಧನ ವಿನಿಯೋಗ ಮಸೂದೆ ಮಂಡನೆಯಾಗಿ ಅನುಮೋದನೆ ಪಡೆದಿದೆ. ಇಂದು ಕಲಾಪ 10.30ಕ್ಕೆ ಆರಂಭವಾಗಲಿದೆ. ಸಾಕಷ್ಟು ಪ್ರಮುಖ ವಿಚಾರಗಳನ್ನು ಕಲಾಪದಲ್ಲಿ ಚರ್ಚಿಸುವ ಅಗತ್ಯ ಇರುವ ಹಿನ್ನೆಲೆ ಹೆಚ್ಚಿನ ಕಾಲಾವಧಿಯನ್ನು ಪ್ರತಿಪಕ್ಷ ಕಾಂಗ್ರೆಸ್ ನಿರೀಕ್ಷಿಸುತ್ತಿದೆ. ಆದರೆ, ಕಡೆಯ ದಿನವಾದ ಹಿನ್ನೆಲೆ ಮಧ್ಯಾಹ್ನದ ಒಳಗೆ ಕಲಾಪವನ್ನು ಪೂರ್ಣಗೊಳಿಸಿ ಸಭಾಪತಿಗಳು ಅನಿರ್ದಿಷ್ಟಾವಧಿಗೆ ಮುಂದೂಡುವ ಸಾಧ್ಯತೆ ಇದೆ.
ಲಖನ್ ಜಾರಕಿಹೊಳಿ ಬೆಂಬಲ : ವಿಧಾನಸಭೆಯಲ್ಲಿ ಗದ್ದಲದ ನಡುವೆ ನಿನ್ನೆ ಅನುಮೋದನೆ ಪಡೆದಿರುವ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2021 ಅನ್ನು ವಿಧಾನಪರಿಷತ್‌ನಲ್ಲಿ ಮಂಡನೆ ಮಾಡದಿರಲು ಸರ್ಕಾರ ತೀರ್ಮಾನಿಸಿದೆ ಎಂಬ ಮಾಹಿತಿ ಇದೆ. ಮಸೂದೆಯನ್ನು ಕೆಳಮನೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ತೀವ್ರವಾಗಿ ವಿರೋಧಿಸಿದ್ದಾರೆ.
ಮೇಲ್ಮನೆಯಲ್ಲಿ ಸ್ವತಂತ್ರವಾಗಿ ಬಿಲ್ ಪಾಸ್ ಮಾಡಿಕೊಳ್ಳುವ ಸದಸ್ಯ ಬಲ ಬಿಜೆಪಿಗೆ ಇಲ್ಲ. ಇದರಿಂದಾಗಿ ಜನವರಿಯಲ್ಲಿ ಬಜೆಟ್ ಪೂರ್ವಭಾವಿ ಅಧಿವೇಶನ ನಡೆಯಲಿದೆ. ಆ ವೇಳೆಗೆ 37 ಸದಸ್ಯರ ಬಲ ಹೊಂದುವ ಬಿಜೆಪಿ ಪಕ್ಷೇತರ ಸದಸ್ಯ ಲಖನ್ ಜಾರಕಿಹೊಳಿ ಬೆಂಬಲವನ್ನು ಪಡೆದು ವಿಧಾನಪರಿಷತ್ತಿನಲ್ಲಿ ವಿಧೇಯಕ ಅನುಮೋದನೆ ಪಡೆಯುವ ಚಿಂತನೆ ನಡೆಸಿದೆ.
ಮಂತಾಂತರ ನಿಷೇಧ ಕಾಯ್ದೆ ಭವಿಷ್ಯ : ಈ ಹಿನ್ನೆಲೆ ಮುಂದಿನ ಜಂಟಿ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಕಾಯ್ದೆ ಮಂಡನೆಯಾಗಿ ಅನುಮೋದನೆ ಪಡೆಯಲಿದೆ ಎಂಬ ಮಾಹಿತಿ ಬಿಜೆಪಿಯ ಹಿರಿಯ ಸದಸ್ಯರೊಬ್ಬರು ನೀಡಿದ್ದಾರೆ. ಒಂದೊಮ್ಮೆ ಹಿಂದೆ ವಿಧೇಯಕ ಮಂಡನೆ ಆದರೂ ಸಹ ಇದನ್ನು ಮುಂದಿನ ಅಧಿವೇಶನದಲ್ಲಿ ಚರ್ಚೆಗೆ ಪಡೆದು ಅನುಮೋದನೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ವಿವಿಧ ವಿಚಾರಗಳ ಚರ್ಚೆಗೆ ಮುಂದಾಗಿರುವ ಕಾಂಗ್ರೆಸ್ ಹಿಂದು ಪರಿಷತ್‌ನಲ್ಲಿ ಯಾವ ರೀತಿ ತನ್ನ ನಿಲುವನ್ನ ವ್ಯಕ್ತಪಡಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.