ಬೆಳಗಾವಿ: ವಿಧಾನಸಭೆಯಲ್ಲಿ 2020-21ನೇ ಸಾಲಿನ ಸಿಎಜಿ ವರದಿ ಮಂಡನೆಯಾಗಿದ್ದು, ರಾಜ್ಯದ ಸಾರ್ವಜನಿಕ ಸಾಲ ಶೇ.31.38ರಷ್ಟು ಏರಿಕೆಯಾಗಿರುವ ಬಗ್ಗೆ ಉಲ್ಲೇಖವಾಗಿದೆ. ಕೋವಿಡ್ - ಲಾಕ್ಡೌನ್ನಿಂದ ಉಂಟಾದ ಆದಾಯ ಕೊರತೆ ಹಿನ್ನೆಲೆ ರಾಜ್ಯ ಸರ್ಕಾರ ಆರ್ಥಿಕ ನಿರ್ವಹಣೆಗಾಗಿ ಭಾರೀ ಪ್ರಮಾಣದಲ್ಲಿ ಸಾಲದ ಮೊರೆ ಹೋಗಿದೆ.
ಈ ಸಂಬಂಧ ಸಿಎಜಿ ವರದಿ ಉಲ್ಲೇಖಿಸಿದ್ದು, 2019-20ರಲ್ಲಿ ರಾಜ್ಯದ ಸಾರ್ವಜನಿಕ ಸಾಲದ ಮೊತ್ತ 2.34 ಲಕ್ಷ ಕೋಟಿ ರೂ. ಇತ್ತು. ಅದು 2020-21ಗೆ 3.07 ಲಕ್ಷ ಕೋಟಿಗೆ ಏರಿಕೆಯಾಗಿರುವುದಾಗಿ ತಿಳಿಸಿದೆ.
2019-20ರಲ್ಲಿ 42,147 ಕೋಟಿ ರೂ. ಇದ್ದ ರಾಜ್ಯ ಜಿಎಸ್ಟಿ 2020-21ರಲ್ಲಿ 37,711 ಕೋಟಿ ರೂ.ಗೆ ಇಳಿಕೆಯಾಗಿದೆ. 2020-21 ಸಾಲಿನಲ್ಲಿ 96,506 ಕೋಟಿ ರೂ. ಸಾಲ ಹೆಚ್ಚಾಗಿದೆ. ರಾಜ್ಯ ತೆರಿಗೆ ಆದಾಯ ಸಂಗ್ರಹದಲ್ಲಿ ಸುಮಾರು 14,535 ಕೋಟಿ ರೂ. ಕೊರತೆ ಅನುಭವಿಸಿದೆ.
2019-20ರಿಂದ 2020-21ರವರೆಗೆ 78,000 ಕೋಟಿ ರೂ. ಸಾಲದಲ್ಲಿ ಹೆಚ್ಚಳವಾಗಿದೆ. ಎಸ್ಜಿಎಸ್ಟಿ, ರಾಜ್ಯ ಅಬಕಾರಿ ಸುಂಕ, ಮಾರಾಟ ತೆರಿಗೆ, ಮುದ್ರಾಂಕ ಮತ್ತು ನೋಂದಣಿ ತೆರಿಗೆ, ವಾಹನ ತೆರಿಗೆ ಸಂಗ್ರಹದಲ್ಲಿ ಭಾರೀ ನಷ್ಟ ಅನುಭವಿಸಿದೆ. ಇದರಿಂದ ಹೆಚ್ಚಿನ ಸಾಲ ಪಡೆಯುವುದು ಅನಿವಾರ್ಯವಾಗಿದೆ ಎಂದು ವಿವರಿಸಲಾಗಿದೆ.
ಸಿಎಜಿ ತನ್ನ ವರದಿಯಲ್ಲಿ ಕಳೆದ ಐದು ವರ್ಷವಾದರೂ ನೀರಾವರಿ ಇಲಾಖೆ 13 ಯೋಜನೆ, 41 ರಸ್ತೆ ಯೋಜನೆ, 2 ಕಟ್ಟಡ ಯೋಜನೆ, 3 ಸೇತುವೆ ಕಾಮಗಾರಿಗಳು ಅಪೂರ್ಣವಾಗಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರಕ್ಕೆ 68.65 ಕೋಟಿ ರೂ. ಹೆಚ್ಚುವರಿ ಮರುಪಾವತಿ ಮಾಡಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದೆ.
(ಇದನ್ನೂ ಓದಿ: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 24 ಸಾವಿರ ಮಂದಿಗೆ ಸಾಲ ಸೌಲಭ್ಯ.. ನಿಮಗೂ ಬೇಕಾ ಇಂದೇ ಅರ್ಜಿ ಸಲ್ಲಿಸಿ!)