ಗೋಕಾಕ್: ಜಾರಕಿಹೊಳಿ ಸಹೋದರರಿಗೆ ಪೈಪೋಟಿ ನೀಡಿ ಜೆಡಿಎಸ್ ಪಕ್ಷದಿಂದ ಉಪ ಚುನಾವಣಾ ಅಖಾಡಕ್ಕಿಳಿದಿರುವ ಅಶೋಕ್ ಪೂಜಾರಿ ಜಂಗಮ ಜೋಳಿಗೆ ಹಿಡಿದು ಮತಬೇಟೆ ಆರಂಭಿಸಿದ್ದಾರೆ. ಈ ನಡುವೆ ಜಾರಕಿಹೊಳಿ ಸಹೋದರರ ವಿರುದ್ಧ ಗುಡುಗಿದ್ದಾರೆ.
ಇಂದು ಪ್ರಚಾರದ ವೇಳೆ ಮಾತನಾಡಿದ ಅವರು, ಜನ ಕಾಂಗ್ರೆಸ್ ಪಕ್ಷದಿಂದ ಆಯ್ಕೆ ಮಾಡಿ ಕಳುಹಿಸಿದ್ದ ಶಾಸಕರು ಅದನ್ನು ಬಿಟ್ಟು ಗೋಕಾಕ್ ಜಿಲ್ಲಾ ಆಗಲು, ಕಾರ್ಖಾನೆ ಹಾಕಲು ರಾಜೀನಾಮೆ ಕೊಟ್ಟಿದ್ದರೆ ನಾನೇ ಅವರೊಂದಿಗೆ ಕೈಜೋಡಿಸುತ್ತಿದ್ದೆ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಹರಿಹಾಯ್ದರು.
ಅಲ್ಲದೆ, ಗೋಕಾಕದಲ್ಲಿ ಜನ ಭಯದಲ್ಲಿ ಬಾಳುತ್ತಿದ್ದಾರೆ. ಬಾಯ್ಬಿಟ್ಟು ಮಾತಾಡುವ ವಾತಾವರಣ ಇಲ್ಲ. ಮೊದಲು ಅದನ್ನ ಮಟ್ಟ ಹಾಕಬೇಕಿದೆ ಎಂದು ಪೂಜಾರಿ ಹೇಳಿದ್ರು. ಹಣದ ಮೇಲೆ ಚುನಾವಣೆ ನಡೆದಿದ್ದರಿಂದ ನಾನು ಕಳೆದ ಮೂರೂ ಬಾರಿ ಸೋತಿದ್ದೇನೆ. ಎಲ್ಲರೂ ಸಂಪೂರ್ಣ ಬೆಂಬಲ ನೀಡಬೇಕೆಂದು ಮತ ಭಿಕ್ಷೆ ಹಾಕಿ ಎಂದು ಮನವಿ ಮಾಡಿದ್ರು.
ಸರ್ಕಾರಿ ಕಚೇರಿಗಳಲ್ಲಿ ಜಾರಕಿಹೊಳಿ ಅವರ ಫೋನ್ ಬಂದ ಮೇಲೆಯೇ ಕೆಲಸ ಆಗುತ್ತವೆ. ಇಂತಹ ವ್ಯವಸ್ಥೆ ಎಲ್ಲಿಯೂ ಇಲ್ಲ. ಸಾವಕಾರ್ ಕಡೆಯಿಂದ ಫೋನ್ ಬಂದ್ರೆ ಮಾತ್ರ ಕೆಲಸ ಎಂದು ಓರ್ವ ತಹಶಿಲ್ದಾರ್ ಹೇಳ್ತಾರೆ. ಇದು ಹೀಗೆ ಮುಂದೆವರೆದರೆ ಜಾರಕಿಹೊಳಿಯವರ ಮನೆ ಇದ್ದಲ್ಲಿಗೆ ಇಲ್ಲಿಯ ಕಚೇರಿಗಳು ಸ್ಥಳಾಂತರ ಆಗುತ್ತವೆ. ಮುಂದೆ ಸರ್ಕಾರವೇ ಜಾರಕಿಹೊಳಿ ಕುಟುಂಬಕ್ಕೆ ಗೋಕಾಕ್ನ್ನು ಬರೆದು ಕೊಡುವ ಪರಿಸ್ಥಿತಿ ಬರಬಹುದು ಎಂದು ಜೆಡಿಎಸ್ ಅಭ್ಯರ್ಥಿ ಆತಂಕ ವ್ಯಕ್ತಪಡಿಸಿದರು. ಅಲ್ಲದೆ, ಬದಲಾವಣೆಗಾಗಿ ಈ ಬಾರಿ ನಿರ್ಭಿಡೆಯಿಂದ ಮತ ಹಾಕಬೇಕು ಎಂದು ಮತದಾರರಿಗೆ ಮನವಿ ಮಾಡಿದ್ರು.