ಬೆಳಗಾವಿ: ರಾಜಕೀಯವಾಗಿ ನಾವೆಲ್ಲರೂ ಒಂದೇ ಎಂಬುವುದು ಹಲವಾರ ಅಭಿಪ್ರಾಯ. ಆದರೆ ಜಾರಕಿಹೊಳಿ ಸಹೋದರರು ರಾಜಕೀಯವಾಗಿ ಒಂದೇ ಎಂಬುದು ಭ್ರಮೆ. ರಾಜಕೀಯವಾಗಿ ನಾವೆಲ್ಲರೂ ಭಿನ್ನವಾಗಿದ್ದೇವೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲರೂ ಒಂದೇ ಇದ್ದೇವೆ ಎಂಬ ಭ್ರಮೆಯಲ್ಲಿ ಜನರಿದ್ದಾರೆ. ನಾವು ಒಂದೇ ಅಲ್ಲ ಎಂದು ತೋರಿಸಲು ಗೋಕಾಕಿನಲ್ಲಿ ಹೋರಾಟ ನಡೆಸಲಾಗಿದೆ. ಜನರ ಬಳಿ ಹೋಗಿ ರಮೇಶ್ ಮತ್ತು ನಾವು ಬೇರೆ ಬೇರೆ ಎಂದು ಹೇಳುವ ಸರ್ಕಸ್ ಮಾಡುತ್ತಿದ್ದೇವೆ. ರಾಜಕೀಯ ವಿಚಾರದಲ್ಲಿ ನಾನು ಮತ್ತು ರಮೇಶ್ ಒಂದೇ ರೀತಿ ಇಲ್ಲ. ಮೊದಲಿನಿಂದಲೂ ನಾವು ಭಿನ್ನವಾಗಿದ್ದೇವೆ.
ಗೋಕಾಕ್ ಕ್ಷೇತ್ರದ ಜನತೆ ಸಮಸ್ಯೆ ಕೇಳಬೇಕಿದ್ದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಈಗ ಅಮೆರಿಕ ಪ್ರವಾಸದಲ್ಲಿದ್ದಾರೆ. ಹೀಗಾಗಿ ನಾವು ಜನರ ಸಮಸ್ಯೆ ಕೇಳುತ್ತಿದ್ದೇವೆ. ರಮೇಶ್ ಇಷ್ಟು ದಿನ ಶಾಸಕ, ಸಚಿವನಾಗಿದ್ದು ನಾಮಕಾವಾಸ್ತೆ ಅಷ್ಟೇ. ರಮೇಶ್ ಅಳಿಯ ಅಂಬಿರಾವ್ ಪಾಟೀಲ್ ಹಿಡಿತದಲ್ಲಿ ಗೋಕಾಕ್ ಕ್ಷೇತ್ರವಿದೆ. ಗೋಕಾಕ್ ನಗರಸಭೆಯಲ್ಲಿ ನಡೆದ ಅವ್ಯವಹಾರ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಭ್ರಷ್ಟಾಚಾರದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಿಂದ ಹಿಡಿದು ರಮೇಶ್ ಜಾರಕಿಹೊಳಿ ಬೆಂಬಲಿಗರ ಪಾಲಿದೆ. ಗೋಕಾಕಿನಲ್ಲಿ ನಡೆದ ಭ್ರಷ್ಟಾಚಾರ ಕುರಿತು ಹಂತ ಹಂತವಾಗಿ ತೆರದಿಡುತ್ತೇವೆ. ಅಂಬಿರಾವ್ ಪಾಟೀಲ್ ನಿಯಂತ್ರಣ ತಪ್ಪಿಸಲು ನಾವು ಹೊರಾಡುತ್ತಿದ್ದೇವೆ ಎಂದರು.
ಬಿಜೆಪಿ ಅತೃಪ್ತರು ನಮ್ಮ ಸಂಪರ್ಕದಲ್ಲಿದ್ದಾರೆ: ಸತೀಶ್ ಹೊಸ ಬಾಂಬ್
ಇನ್ನು, ಅನರ್ಹ ಶಾಸಕರ ವಿರುದ್ಧ ಸೋತಿರುವ ಹಲವರು ಕಾಂಗ್ರೆಸ್ ಸೇರ್ಪಡೆಗೆ ಒಲವು ತೋರಿದ್ದಾರೆ. ಈಗಾಗಲೇ ಹಲವರು ನಮ್ಮ ನಾಯಕರನ್ನು ಭೇಟಿ ಆಗಿದ್ದಾರೆ ಎಂದು ಸತೀಶ್ ಹೊಸ ಬಾಂಬ್ ಸಿಡಿಸಿದ್ದಾರೆ. ಉಪ ಚುನಾವಣೆಗೆ ಬಿಜೆಪಿಯಲ್ಲಿ ಟಿಕೆಟ್ ಸಿಗದ ಕೆಲವರು ನಮ್ಮ ಹೈಕಮಾಂಡ್ ಜತೆಗೆ ಮಾತುಕತೆ ನಡೆಸಿದ್ದಾರೆ. ಆಯಾ ಕ್ಷೇತ್ರದ ಆಗುಹೋಗು ನೋಡಿ ಪಕ್ಷಕ್ಕೆ ಸೇರಿಸಿಕೊಳ್ಳುವ ಚಿಂತನೆ ಇದೆ. ಕಾಂಗ್ರೆಸ್ಗೆ ಬಂದವರಿಗೆ ಹೈಕಮಾಂಡ್ ಟಿಕೆಟ್ ಕೊಡಬಹುದು ಎಂದರು.