ಬೆಳಗಾವಿ: ಕೆ.ಎಸ್. ಈಶ್ವರಪ್ಪ ಬಿಜೆಪಿಯಿಂದ ಹಲಾಲ್ ಆದ ಮೊಟ್ಟ ಮೊದಲ ವ್ಯಕ್ತಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು. ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೆ.ಎಸ್. ಈಶ್ವರಪ್ಪನವರ ಸರದಿ ಬಂದಿತ್ತು, ಹಲಾಲ್ ಆದರು. ಇನ್ನೂ ಬಹಳಷ್ಟು ಸಚಿವರ ಹಲಾಲ್ ಆಗಲಿದೆ. ಶೀಘ್ರವೇ ಅವರ ಸರದಿಯೂ ಬರಲಿದೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಆಗಿದೆ. ಹೀಗಾಗಿ ಇನ್ನೂ ಅನೇಕ ಸಚಿವರು ಭ್ರಷ್ಟಾಚಾರಕ್ಕೆ ಬಲಿ ಆಗಲಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಶೇ 40 ಕಮಿಷನ್ ಇದೆ. ಕೇವಲ ರಾಜೀನಾಮೆ ಅಲ್ಲ, ಈಶ್ವರಪ್ಪ ಬಂಧನ ಆಗುವವರೆಗೆ ಹೋರಾಡುತ್ತೇವೆ. ನಾಳೆಯಿಂದ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.
ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕೆ.ಎಸ್. ಈಶ್ವರಪ್ಪ ಕಾರಣ. ಬಿಜೆಪಿ ಸಂಪೂರ್ಣವಾಗಿ ಭ್ರಷ್ಟಾಚಾರಕ್ಕೆ ಇಳಿದಿದೆ. ರಾಜ್ಯದ ಭ್ರಷ್ಟಾಚಾರ ಪ್ರಧಾನಿ ನರೇಂದ್ರ ಮೋದಿಗೆ ಗೊತ್ತಿದೆ. ಹೀಗಿದ್ದರೂ ನರೇಂದ್ರ ಮೋದಿಯವರು ಎಲ್ಲರನ್ನೂ ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು. ವಿದೇಶಿ, ಭಾರತೀಯ ಆರ್ಥಿಕ ತಜ್ಞರು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಜನರು ಎಚ್ಚೆತ್ತುಕೊಳ್ಳಬೇಕು, ಇಲ್ಲವಾದರೆ ದೇಶಕ್ಕೆ ಕೆಟ್ಟ ಸ್ಥಿತಿ ಬರಲಿದೆ ಎಂದರು.
ಇದನ್ನೂ ಓದಿ: ಈಶ್ವರಪ್ಪ ಬಂಧನಕ್ಕೆ ಆಗ್ರಹ: ಇಂದಿನಿಂದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ