ಚಿಕ್ಕೋಡಿ: ಅಪೌಷ್ಠಿಕತೆ ಹೋಗಲಾಡಿಸಲು ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಅಂಗನವಾಡಿ ಹಾಗೂ ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆ ಅಡಿ ಹಾಲಿನ ಪುಡಿ ಸರಬರಾಜು ಮಾಡುತ್ತದೆ. ಆದರೆ, ಅಕ್ರಮವಾಗಿ ಹಾಲಿನ ಪುಡಿ ಸಾಗಣೆ ಮಾಡುತ್ತಿದ್ದ ಓರ್ವನನ್ನು ಗ್ರಾಮಸ್ಥರು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಅಥಣಿ ತಾಲೂಕಿನ ಖಿಳೆಗಾಂವ್ ಗ್ರಾಮದಲ್ಲಿ ನಡೆದಿದೆ.
ಅಕ್ರಮವಾಗಿ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿಯನ್ನು ಬೈಕ್ ಮೂಲಕ ಸಾಗಣೆ ಮಾಡುತ್ತಿದ್ದದ್ದು ಅಥಣಿ ತಾಲೂಕಿನ ಅನಂತಪುರ ಗ್ರಾಮದ ಗಂಗಾಧರ ಶಂಕರ ಪತ್ತಾರ ಎಂದು ತಿಳಿದು ಬಂದಿದೆ.
ಗಂಗಾಧರನನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು:
ಕಳೆದ ಒಂದು ವರ್ಷದಿಂದ ಇದೇ ರೀತಿಯಾಗಿ ಅಕ್ರಮವಾಗಿ ಹಾಲಿನ ಪುಡಿ ಸಾಗಾಟ ಮಾಡುತ್ತಿರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಖಿಳೇಗಾಂವ್ ಗ್ರಾಮದ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳಿಂದ ಹಾಲಿನಪುಡಿ ಪ್ಯಾಕೆಟ್ ತೆಗೆದುಕೊಂಡು ಸಾಗಣೆ ಮಾಡುತ್ತಿದ್ದ ಗಂಗಾಧರ ಶಂಕರ ಪತ್ತಾರನನ್ನು ಗ್ರಾಮಸ್ಥರು ತಡೆಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಆತನನ್ನು ಅಥಣಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಸ್ನೇಹಿತ ರಾಜು ಪಾಟೀಲ್ ಮೃತ ದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಸಿಎಂ
ಸ್ಥಳಕ್ಕೆ ಅಥಣಿ ಪೊಲೀಸ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕ್ಷೀರಭಾಗ್ಯ ಹಾಲಿನ ಪುಡಿ ಹಾಲಾಗಿ ಮಾರ್ಪಾಟಾಗಿ ಮಹಾರಾಷ್ಟ್ರಕ್ಕೆ ರವಾನೆ:
ಕ್ಷೀರಭಾಗ್ಯ ಹಾಲಿನ ಪುಡಿಯನ್ನು ಸರ್ಕಾರಿ ಶಾಲೆಗಳಿಂದ ಕಡಿಮೆ ಬೆಲೆಗೆ ಕೊಂಡುಕೊಂಡು ಅದನ್ನೇ ಹಾಲಾಗಿ ಪರಿವರ್ತಿಸಿ ಪಕ್ಕದ ಮಹಾರಾಷ್ಟ್ರಕ್ಕೆ ಸರಬರಾಜು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಹಾಗೂ ಪೇಡ, ಕುಂದಾ ಮಾಡಿ ಮಾರಾಟ ಮಾಡುತ್ತಿದ್ದರು ಎಂದು ಕೂಡ ಸ್ಥಳೀಯರು ಮಾಹಿತಿ ಹಂಚಿಕೊಂಡಿದ್ದಾರೆ.
ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯ ಈ ರೀತಿ ದುರುಪಯೋಗ ಆಗದಂತೆ ನೋಡಿಕೊಳ್ಳದಿರುವುದಕ್ಕೆ ಅಧಿಕಾರಿಗಳ ಬೇಜವಾಬ್ದಾರಿ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.