ಅಥಣಿ: ಲಾಕ್ಡೌನ್ ನಡುವೆಯೂ ಅಕ್ರಮ ಮರಳು ಸಾಗಾಟ ಮುಂದುವರೆದಿದ್ದು, ಅಕ್ರಮ ತಡೆಯಲು ಹೋದ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಅವರ ಮೇಲೆಯೇ ವಾಹನ ಹರಿಸಿ ಕೊಲೆ ಪ್ರಯತ್ನ ನಡೆದಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.
ಬಾಳು ಹಜಾರೆ ಎಂಬಾತ ಟ್ರ್ಯಾಕ್ಟರ್ ಹತ್ತಿಸಿ ಹಲ್ಲೆಗೆ ಯತ್ನಿಸಿದ. ತಾಲೂಕಿನ ಖಿಳೆಗಾಂವ-ಶಿರೂರ ನಡುವಿನ ಹಳ್ಳದಲ್ಲಿ ಮರಳು ಸಾಗಿಸುತ್ತಿದ್ದರ ಕುರಿತು ಮಾಹಿತಿ ಪಡೆದು ತಹಶೀಲ್ದಾರ್ ಮತ್ತು ಸಿಬ್ಬಂದಿ ದಾಳಿ ನಡೆಸಿದಾಗ ಈ ಘಟನೆ ಸಂಭವಿಸಿದೆ. ಆ ಸಂದರ್ಭದಲ್ಲಿ ತಹಶೀಲ್ದಾರ್ ವಾಹನ ಚಾಲಕ ಅನಿಲ್ ಗಸ್ತಿ ತೀವ್ರವಾಗಿ ಗಾಯಗೊಂಡಿದ್ದಾನೆ.
ಕೊರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ಪೊಲೀಸರು ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಸುತ್ತಿದ್ದಾರೆ. ಅಕ್ರಮವನ್ನು ಹೋದ ತಹಶೀಲ್ದಾರ್ ಮೇಲಿನ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಹೀಗಾಗಿ ಕಂದಾಯ ಇಲಾಖೆಯ ಉಳಿದ ಸಿಬ್ಬಂದಿ ಕೂಡ ಭಯದ ವಾತಾವರಣದಲ್ಲಿ ಕೆಲಸ ನಿರ್ವಹಿಸಲು ಭಯದ ವಾತಾವರಣ ನಿರ್ಮಾಣವಾಗಿದೆ.
ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟ ತಡೆಯುವ ಹಂತದಲ್ಲಿ ಲೋಕೋಪಯೋಗಿ, ಜುವಾಲಜಿ ಇಲಾಖೆ, ತಹಶೀಲ್ದಾರ್ ಹಾಗೂ ಪೊಲೀಸರ ನಡುವಿನ ಸಮನ್ವಯ ಕೊರತೆಯೂ ಅಕ್ರಮ ದಂಧೆಕೋರರಿಗೆ ಲಾಭದಾಯಕವಾಗಿ ಪರಿಣಮಿಸಿದೆ ಎನ್ನಲಾಗಿದೆ.