ಬೆಳಗಾವಿ: ಸತಿ-ಪತಿ ಸಂಸಾರದ ಎರಡು ಕಣ್ಣುಗಳಿದ್ದಂತೆ. ಅವರಿಬ್ಬರ ಮಧ್ಯೆ ಹೊಂದಾಣಿಕೆ ಉತ್ತಮವಾಗಿದ್ದರೆ ಮಾತ್ರ ದಾಂಪತ್ಯ ಜೀವನ ಸ್ವರ್ಗಕ್ಕೆ ಸಮಾನವಾಗುತ್ತದೆ. ನಗರದ ವ್ಯಕ್ತಿಯೊಬ್ಬರು ತನ್ನ ಪತ್ನಿ ಇಹಲೋಕ ತ್ಯಜಿಸಿದ್ದರೂ ಸಹ ಅವರನ್ನು ತನ್ನ ಮನದಲ್ಲಿ ಜೀವಂತವಾಗಿರಿಸಿ, ಆದರ್ಶ ಪತಿಯಾಗಿದ್ದಾರೆ.
ಹೌದು, ನಿಮೋನಿಯಾದಿಂದ ಅಗಲಿದ ನೆಚ್ಚಿನ ಪತ್ನಿಗೆ ಮನೆಯಲ್ಲೇ ಮೂರ್ತಿ ಪ್ರತಿಷ್ಠಾಪಿಸಿ ದಾಂಪತ್ಯ ಜೀವನಕ್ಕೆ ಸುಂದರ ಅರ್ಥ ಕಲ್ಪಿಸುವ ಮೂಲಕ ಇಲ್ಲೊಬ್ಬರು ಗಮನ ಸೆಳೆದಿದ್ದಾರೆ. ಬೆಳಗಾವಿಯ ಮರಗಾಯಿ ನಗರದ ನಿವಾಸಿ, ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಮೈನಾಬಾಯಿ ಚೌಗಲೆ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತ್ನಿಯ ಅಗಲಿಕೆಯಿಂದ ಮನನೊಂದ ಪತಿ ಶಿವಾ ಚೌಗಲೆ ಅವರು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಪತ್ನಿಯ ಮೂರ್ತಿ ತಯಾರಿಸಿ, ದೀಪಾವಳಿಯ ಶುಭ ಸಂದರ್ಭದಲ್ಲಿ ಮನೆಯಲ್ಲೇ ಪ್ರತಿಷ್ಠಾಪಿಸಿದ್ದಾರೆ.
ಅದ್ಧೂರಿಯಾಗಿ ಪತ್ನಿಯ ಮೂರ್ತಿ ಪ್ರತಿಷ್ಠಾಪಿಸಿದ ಪತಿ:
ಇದೇ ವರ್ಷ ಮೇ ತಿಂಗಳಲ್ಲಿ ಶಿವಾ ಚೌಗಲೆ ಹಾಗೂ ಮೈನಾಬಾಯಿ ಚೌಗಲೆಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಶಿವಾ ಚೌಗಲೆಗೆ ಕೋವಿಡ್ ಸೋಂಕು ತಗಲಿದ್ರೆ, ಪತ್ನಿ ಮೈನಾಬಾಯಿಗೆ ನಿಮೋನಿಯಾ ಮತ್ತು ಜ್ವರ ಬಾಧಿಸಿತ್ತು. ಈ ವೇಳೆ ಚಿಕಿತ್ಸೆ ಫಲಿಸದೆ ಮೈನಾಬಾಯಿ ಮೃತಪಟ್ಟಿದ್ದರು. ಜ್ಯೋತಿಷಿಗಳ ಸಲಹೆ ಮೇರೆಗೆ ಶಿವಾ ತನ್ನ ಪತ್ನಿಯ ಮೂರ್ತಿ ನಿರ್ಮಾಣ ಮಾಡಿಸಿ, ಅದ್ಧೂರಿಯಾಗಿ ಮೂರ್ತಿ ಸ್ಥಾಪನೆ ಕಾರ್ಯಕ್ರಮ ನೆರವೇರಿಸಿದ್ದಾರೆ. ಈ ವಿಶೇಷ ಕಾರ್ಯಕ್ರಮಕ್ಕೆ ಮನೆ ಮುಂದೆ ಪೆಂಡಾಲ್ ಹಾಕಿ, ಬಂಧು-ಬಳಗ, ಸ್ನೇಹಿತರನ್ನು ಆಹ್ವಾನಿಸಿದ್ದರು.
ಪತ್ನಿ ಹೆಸರಲ್ಲಿ ಫೌಂಡೇಷನ್:
ಮನೆಯ ಮೇಲಿನ ಕೋಣೆಯಲ್ಲಿ ಮೈನಾಬಾಯಿ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಮೈನಾಬಾಯಿ ಧರಿಸುತ್ತಿದ್ದ ಒಡವೆ, ಸೀರೆ ಸೇರಿದಂತೆ ಇತರೆ ವಸ್ತುಗಳನ್ನು ಇಡಲು ವಾರ್ಡ್ರೋಬ್ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಈ ದಂಪತಿ ಪಾಲಿಕೆ ಸದಸ್ಯರಾಗಿ ಒಟ್ಟಿಗೆ ಕೆಲಸ ಮಾಡಿದ್ದು, ಪತ್ನಿಯ ಹೆಸರಿನಲ್ಲಿ ಫೌಂಡೇಶನ್ ಸ್ಥಾಪನೆ ಮಾಡಿ ಅಭಿವೃದ್ಧಿ ಕಾರ್ಯ ನಡೆಸಲು ಪತಿ ಶಿವಾ ಚೌಗಲೆ ನಿರ್ಧರಿಸಿದ್ದಾರೆ.