ಚಿಕ್ಕೋಡಿ: ಬೀದಿನಾಯಿಗಳ ಹಾವಳಿ ತಡೆಯಲಾಗದೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ನಾಯಿ ಹಿಡಿಯುವ ತಂಡವನ್ನು ಕರೆಸಿ ಬೀದಿನಾಯಿಗಳಿಂದ ಜನರಿಗೆ ಉಂಟಾದ ತೊಂದರೆಯನ್ನು ಹುಕ್ಕೇರಿ ಪುರಸಭೆ ಅಧಿಕಾರಿಗಳು ಬಗೆಹರಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬಸ್ ನಿಲ್ದಾಣ, ಕಸಾಯಿ ಖಾನೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ನಾಯಿಗಳು ಗುಂಪು ಗುಂಪಾಗಿ ತಿರುಗಿ ಜನರಿಗೆ ಭಯ ಹುಟ್ಟಿಸಿದ್ದವು. ಅಲ್ಲದೇ ಹಲವಾರು ಜನರು ನಾಯಿಗಳ ದಾಳಿಯಿಂದ ಗಾಯಗೊಂಡಿದ್ದರು. ಇದರಿಂದ ಬೇಸತ್ತು ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಬೀದಿನಾಯಿಗಳನ್ನು ಹಿಡಿಸಿದ್ದು, ಅರಣ್ಯ ಪ್ರದೇಶಕ್ಕೆ ಬಿಟ್ಟುಬರಲು ಸೂಚಿಸಿದ್ದಾರೆ. ಇಲ್ಲಿ ಒಂದು ನಾಯಿ ಹಿಡಿದರೆ 125 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ.
ಪ್ರಾಣಿಗಳಿಗೆ ಹಿಂಸೆಯಾಗದಂತೆ ಮುಂಜಾಗ್ರತೆ ವಹಿಸುವಂತೆ ಸಲಹೆ ನೀಡಿದ್ದು, ಇಲ್ಲಿವರಗೆ 8 ತಂಡಗಳು 375 ನಾಯಿಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟುಬಂದಿವೆ. ಇದರಿಂದ ಪಟ್ಟಣದಲ್ಲಿ ಬೀದಿನಾಯಿಗಳ ಸಂಖ್ಯೆ ಇಳಿಮುಖವಾಗಿದ್ದು, ಇನ್ನೂ 100 ಕ್ಕೂ ಹೆಚ್ಚು ಬೀದಿ ನಾಯಿಗಳು ಇರಬಹುದೆಂದು ಅಂದಾಜಿಸಲಾಗಿದೆ.
12 ಜನರಿಗೆ ನಾಯಿ ಕಡಿತ:
ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಗೋರಕ್ಷಣಾ ಮಾಳ, ಜನತಾ ಪ್ಲಾಟ್ ಸೇರಿದಂತೆ ನಾನಾ ಬಡವಣೆಗಳಲ್ಲಿ 12 ಜನ ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಕೆಲವರು ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ ಕೆಲವರು ಜಿಲ್ಲಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಂದಿಗಳ ಕಾಟಕ್ಕೂ ಪರಿಹಾರ :
ಹುಕ್ಕೇರಿ ಪಟ್ಟಣದಲ್ಲಿ ಸಾರ್ವಜನಿಕರಿಗೆ ಹಂದಿಗಳ ಕಾಟ ಜಾಸ್ತಿಯಾಗಿದ್ದು ಜನರ ಮನೆಗಳಿಗೆ ನುಗ್ಗಿ ದವಸ ಧಾನ್ಯಗಳನ್ನು ನಾಶಪಡಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ನಾಯಿಗಳ ಕಾರ್ಯಾಚರಣೆ ಮುಗಿದ ನಂತರ ಬೀದಿ ಹಂದಿಗಳನ್ನು ಹಿಡಿದು ಸ್ಥಳಾಂತರಿಸಲಾಗುವುದೆಂದು ಪುರಸಭೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.