ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಭಾರಿ ಮಳೆಯಾದ ಪರಿಣಾಮ ಅನೇಕ ಮನೆಗಳು ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಸ್ಥಳಕ್ಕೆ ಬೈಲಹೊಂಗಲ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗುರುವಾರ ಮೂರು ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಗೆ ಬೈಲಹೊಂಗಲ ಪಟ್ಟಣದ ಭಾಗವಾನ ಚಾಳ್ನಲ್ಲಿ ಅನೇಕ ಮನೆಗಳಿಗೆ ಹಾನಿಯಾಗಿವೆ. ಮನೆಗಳ ಗೋಡೆ ಹಾಗೂ ಛಾವಣಿ ಕುಸಿದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರಾಗಿದ್ದಾರೆ.
ಇನ್ನು ಸ್ಥಳಗಳಿಗೆ ಬೈಲಹೊಂಗಲ ತಹಶೀಲ್ದಾರ್ ದೊಡ್ಡಪ್ಪ ಹೂಗಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ನಗರದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಮೂರು ಗಂಟೆಗಳ ಕಾಲ ಸುರಿದ ಮಳೆಗೆ ರಸ್ತೆಗಳು ಜಲಾವೃತವಾಗಿದೆ. ಹೀಗಾಗಿ ಚರಂಡಿ ನಿರ್ಮಿಸದ ಪುರಸಭೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.