ಬೆಳಗಾವಿ: ಮಳೆಗೆ ನೆನೆದಿದ್ದ ಗೋಡೆಯೊಂದು ತಡರಾತ್ರಿ ಕುಸಿದಿದೆ. ಸುದೈವವಶಾತ್, ಒಂದೇ ಕುಟುಂಬದ ಎಂಟು ಜನರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ಘಟನೆ ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದಲ್ಲಿ ನಡೆದಿದೆ. ಒಂದು ವಾರದ ಹಿಂದೆಯಷ್ಟೇ ಬಡಾಲ ಅಂಕಲಗಿ ಗ್ರಾಮದಲ್ಲಿ ಗೋಡೆ ಕುಸಿತು ಏಳು ಮಂದಿ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದರು.
ಅಗಸಗಿ ಗ್ರಾಮದ ಕಲ್ಮೇಶ್ವರ ಗಲ್ಲಿಯಲ್ಲಿ ಬಾಳು ಕಡೋಲ್ಕರ್ ಹಾಗೂ ಬಸವಣ್ಣಿ ಕಡೋಲ್ಕರ್ ಸಹೋದರರ ಕುಟುಂಬಗಳು ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದರು. ವಾರಾಂತ್ಯದಲ್ಲಿ ಸುರಿದ ಮಳೆ ನೀರು ಕಡೋಲ್ಕರ್ ಅವರ ಮನೆಗೂ ನುಗ್ಗಿತ್ತು. ಮಳೆ ನೀರು ಹೊರ ಹಾಕಿ ಕಳೆದ ಎರಡು ದಿನಗಳಿಂದ ಕಡೋಲ್ಕರ್ ಕುಟುಂಬದ 8 ಜನ ಸದಸ್ಯರು ಅದೇ ಮನೆಯಲ್ಲಿ ವಾಸವಾಗಿದ್ದರು.