ಬೆಳಗಾವಿ: ಬೆಂಗಳೂರಿನ ಶಿವಾಜಿನಗರದಲ್ಲಿರುವ ಶಿವಾಜಿ ಪುತ್ಥಳಿಗೆ ಕಪ್ಪು ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಈ ವೇಳೆ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಹಿಂದೂಪರ ಸಂಘಟನೆಗಳು ದಿಢೀರ್ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಎಂಇಎಸ್ ಪುಂಡರು ಸೇರಿಕೊಂಡು, ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಡ್ಯೂಟಿಗೆ ಬಂದಿರುವ ಸರ್ಕಾರಿ ವಾಹನಗಳ ಮೇಲೆ ಕಲ್ಲು ಎಸೆದು ಉದ್ಧಟತನ ಮೆರೆಯಲಾಗಿದೆ. ಲಾಡ್ಜ್ ಮುಂಭಾಗದಲ್ಲಿ ನಿಲ್ಲಿಸಿದ್ದ ಕರ್ನಾಟಕ ಸರ್ಕಾರದ ಕಾರುಗಳ ಮೇಲೆ ಕಲ್ಲು ತೂರಿ ಪುಂಡರು ಅಟ್ಟಹಾಸ ಮೆರೆದಿದ್ದಾರೆ.
ಕರ್ನಾಟಕ ಸರ್ಕಾರ ಎಂದು ಹೆಸರು ಬರೆದಿರುವ ಕಡೆ ಉದ್ದೇಶಪೂರ್ವಕವಾಗಿ ಕಲ್ಲು ಎಸೆಯಲಾಗಿದ್ದು, ಕೆಲ ವಾಹನಗಳ ಬೋರ್ಡ್ಗಳನ್ನ ಕಿತ್ತು ತೆಗೆದುಕೊಂಡು ಹೋಗಿರುವ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಸರ್ಕಾರದ ಆರು ಕಾರುಗಳು ಜಖಂಗೊಂಡಿವೆ.
ಇದನ್ನೂ ಓದಿರಿ: ಬೆಳಗಾವಿಯಲ್ಲಿ ಪುಂಡರ ಅಟ್ಟಹಾಸ: ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಮೇಲೆ ಕಲ್ಲು ತೂರಾಟ
ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್
ಬಿಗುವಿನ ವಾತಾವರಣ ನಿರ್ಮಾಣಗೊಳ್ಳುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಿಸಲು ಬೆಳಗಾವಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಕಲ್ಲು ತೂರಿ ಪುಂಡಾಟ ಮೆರೆಯುತ್ತಿದ್ದವರ ಮೆಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡು ಬಂದಿದ್ದಾರೆ. ಪ್ರಮುಖವಾಗಿ ರಾಮಲಿಂಗಖಿಂಡ ಗಲ್ಲಿ, ಕುಲಕರ್ಣಿ ಗಲ್ಲಿ, ಪಾಟೀಲ್ ಗಲ್ಲಿಯಲ್ಲಿ ಲಾಠಿ ಚಾರ್ಜ್ ನಡೆಸಲಾಗಿದೆ.