ಬೆಳಗಾವಿ: ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜೋರು ಮಳೆ ಸುರಿಯುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಅಕಾಲಿಕ ಮಳೆಗೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆ ನೀರು ಪಾಲಾಗಿದೆ. ಇದು ರೈತರನ್ನು ಕಂಗಾಲಾಗುವಂತೆ ಮಾಡಿದೆ.
2-3 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಟಾವು ಮಾಡಿದ್ದ ಭತ್ತ ನೀರಿನಲ್ಲಿ ತೊಯ್ದು ನಾಶವಾಗಿದೆ. ಬೆಳಗಾವಿ, ಖಾನಾಪುರ ಹಾಗೂ ಕಿತ್ತೂರು ತಾಲೂಕಿನಲ್ಲಿ ಅಪಾರ ಪ್ರಮಾಣದ ಭತ್ತ ನಾಶವಾಗಿದೆ.
ಜಡಿ ಮಳೆಯಿಂದಾಗಿ ಗದ್ದೆಯಲ್ಲಿ ನೀರು ಸಾಗದೇ, ಕಟಾವು ಮಾಡಿದ್ದ ಭತ್ತ ಕೊಳೆಯುತ್ತಿದೆ. ಇದರಿಂದ ಕಾಳು ನೆಲಕ್ಕೆ ಬಿದ್ದು ಹಾಳಾಗಿ ರೈತರು ನಷ್ಟಕ್ಕೀಡಾಗುತ್ತಿದ್ದಾರೆ.
ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದ ರೈತ ಸಿದ್ದಪ್ಪ ಪಾಟೀಲ್ ಎಂಬುವವರು 3.5 ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದ್ದರು. ಭತ್ತ ಇತ್ತೀಚೆಗಷ್ಟೇ ಕಟಾವು ಮಾಡಿಸಿದ್ದರು. ಏಕಾಏಕಿ ಸುರಿಯುತ್ತಿರುವ ಮಳೆಯಿಂದಾಗಿ ಕಟಾವು ಮಾಡಿದ ಭತ್ತ ನೀರಿನಲ್ಲಿ ತೇಲುತ್ತಿದೆ. ಕಾಳು ನೆಲಕ್ಕೆ ಉದುರಿ ಬೀಳುತ್ತಿರುವುದಲ್ಲದೇ, ನೆಲದಲ್ಲಿಯೇ ಮೊಳಕೆಯೊಡೆಯುತ್ತಿದೆ.
ಅಕಾಲಿಕ ಮಳೆಯಿಂದ ಭತ್ತ ನೀರು ಪಾಲಾಗಿದೆ. ಕಾಳುಗಳು ನಾಶವಾಗಿವೆ. ಮಳೆ ಭಾರೀ ನಷ್ಟವುಂಟು ಮಾಡಿದೆ ಎಂದು ಸಿದ್ದಪ್ಪ ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 2 ಸಾವಿರ ಹೆಕ್ಟೇರ್ ಭತ್ತಕ್ಕೆ ಹಾನಿ
ಅಕಾಲಿಕ ಮಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಭತ್ತ ಮಳೆಯಿಂದ ಹಾನಿ ಆಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ಅಕಾಲಿಕ ಮಳೆಯಿಂದ ಬೆಳಗಾವಿ ಜಿಲ್ಲೆಯ ಭತ್ತ ಬೆಳೆಗಾರರು ಕಂಗಾಲಾಗಿದ್ದಾರೆ. ಸಂಕಷ್ಟದಲ್ಲಿರುವ ರೈತರತ್ತ ಸರ್ಕಾರ ಗಮನ ಹರಿಸಬೇಕು ಎಂಬುದು ರೈತರ ಒತ್ತಾಸೆಯಾಗಿದೆ.