ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಳತಗಾ ಗ್ರಾಮದ 33 ವರ್ಷದ ಆಶಾ ಕಾರ್ಯಕರ್ತೆ ಸನದಿ ಅವರು ಮಿದುಳಿನ ಪಾರ್ಶ್ವವಾಯು ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಅವರ ಸಾವಿಗೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ಚಿಕ್ಕೋಡಿ ಡಿಎಚ್ಒ ಡಾ.ಎಸ್.ವಿ. ಮುನ್ಯಾಳ ಈಟಿವಿ ಭಾರತ್ಗೆ ಸ್ಪಷ್ಟಪಡಿಸಿದ್ದಾರೆ.
ಜ.22ರಂದು ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಸನದಿ ಅವರು ಫೆ.3ರಂದು ಮೃತಪಟ್ಟಿದ್ದರು. ಲಸಿಕೆ ಪಡೆದ ಎರಡು ಮೂರು ದಿನಗಳ ನಂತರ ಅವರು ಅನಾರೋಗ್ಯಕ್ಕೆ ತುತ್ತಾದರು. ನಂತರ ಅವರಿಗೆ ನೀಡಿದ ಚಿಕಿತ್ಸೆಯಲ್ಲಿ ಮಿದುಳಿಗೆ ಪಾರ್ಶ್ವವಾಯು ಇರುವುದು ಗೊತ್ತಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಸಿವಿಲ್ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ ಮೇಲೆ ಚಿಕಿತ್ಸೆ ಕೊಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಫೆ.3ರಂದು ಅವರು ಅಸುನೀಗಿದ್ದರು.
ಇದನ್ನೂ ಓದಿ...ದೇಶದಲ್ಲೀಗ ನಡೆಯುತ್ತಿರುವ ರೈತರ ಹೋರಾಟಕ್ಕೆ ಪ್ರಾಯೋಜಕತ್ವವಿದೆ: ಕಡಾಡಿ ಆರೋಪ
ಸಾವಿನ ಬಳಿಕ ಮರಣೋತ್ತರ ಪರೀಕ್ಷೆ ನಡೆಸುವುದಾಗಿ ಆರೋಗ್ಯ ಇಲಾಖೆ ತಿಳಿಸಿದರೂ ಆಕೆಯ ಕುಟುಂಬ ಸದಸ್ಯರು ನಿರಾಕರಿಸಿದರು. ಮಿದುಳಿಗೆ ಸಮರ್ಪಕವಾಗಿ ರಕ್ತ ಸಂಚಾರವಾಗದ ಅವರು ಮರಣ ಹೊಂದಿದ್ದಾರೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.