ಬೆಳಗಾವಿ: ಹಿಂದೂಪರ ಸಂಘಟನೆಗಳು ಇಂದಿನಿಂದ ರಾಜ್ಯಾದ್ಯಂತ ದೇವಸ್ಥಾನಗಳಲ್ಲಿ ಸುಪ್ರಭಾತ, ಹನುಮಾನ್ ಚಾಲೀಸಾ ಪಠಣ ಹಿನ್ನೆಲೆಯಲ್ಲಿ ಬೆಳಗಾವಿಯ 500ಕ್ಕೂ ಹೆಚ್ಚು ಮಸೀದಿ ಸೇರಿ ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.
ಬೆಳಿಗ್ಗೆ 5 ಗಂಟೆಗೆ ಬೆಳಗಾವಿ ನಗರದ ಆರ್‌ಟಿಓ ವೃತ್ತದ ಬಳಿಯ ಆಂಜನೇಯ ದೇವಸ್ಥಾನದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಹನುಮಾನ್ ದೇವರ ಮೂರ್ತಿಗೆ ಆರತಿ ಬೆಳಗಿಸಿ, ಹನುಮಾನ ಚಾಲೀಸಾ ಪಠಣ ಮಾಡಿ ಸ್ಪೀಕರ್ನಲ್ಲಿ ಭಜನೆ ಹಾಡು ಮೊಳಗಿಸಿದರು. ಹೀಗೆ ಜಿಲ್ಲೆಯ ಹಲವು ದೇವಸ್ಥಾನಗಳಲ್ಲಿಯೂ ಇಂದಿನಿಂದ ಭಜನೆ, ಹನುಮಾನ ಚಾಲೀಸಾ, ಮಂತ್ರ ಪಠಣ ಪ್ರಾರಂಭಿಸಲಾಗಿದೆ. ಇದರಿಂದಾಗಿ ಬೆಳಗಾವಿ ನಗರದ 100, ಜಿಲ್ಲೆಯ 500ಕ್ಕೂ ಹೆಚ್ಚು ಮಸೀದಿ ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ಪರಿಶೀಲನೆ ನಡೆಸಿದರು. ಸುಪ್ರೀಂಕೋರ್ಟ್ ಆದೇಶವನ್ನು ಮಸೀದಿಗಳಲ್ಲಿ ಎಲ್ಲಿಯವರೆಗೆ ಪಾಲನೆ ಮಾಡುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಅಭಿಯಾನ ಮುಂದುವರೆಸುತ್ತೇವೆ ಎಂದು ಶ್ರೀರಾಮಸೇನೆ ಬೆಳಗಾವಿ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ಹೇಳಿದರು.