ಬೆಳಗಾವಿ : ಪೊಲೀಸರಿಗೆ ಪೋಸ್ಟ್‌ಮೆನ್ ಕೆಲಸ ತಪ್ಪಿಸಲು ಇಲಾಖೆಯಿಂದ ನೀಡುವ ಸಮನ್ಸ್ ಜಾರಿ ಮಾಡುವುದನ್ನು ಖಾಸಗೀಕರಣ ಮಾಡುವ ಚಿಂತನೆ ನಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಕಿತ್ತೂರು ಪಟ್ಟಣದಲ್ಲಿ ಮಾತನಾಡಿ ಅವರು, ಪೊಲೀಸ್ ಠಾಣೆಯಲ್ಲಿ ಸಮನ್ಸ್ ಜಾರಿ ಮಾಡುವುದೇ ಒಂದು ದೊಡ್ಡ ಸವಾಲಿನ ಕೆಲಸವಾಗಿದೆ. ಸಮನ್ಸ್ ನೀಡಲು ಪೊಲೀಸರು ಪಂಜಾಬ್, ರಾಜಸ್ಥಾನ ಸೇರಿದಂತೆ ಎಲ್ಲ ಕಡೆ ಹೋಗುವ ಪರಿಸ್ಥಿತಿ ಇದೆ. ಹೀಗಾಗಿ, ಸಮನ್ಸ್ ನೀಡುವುದನ್ನು ಬೇರೆ ಖಾಸಗಿ ಏಜೆನ್ಸಿ ಮೂಲಕ ಮಾಡಿಸಬೇಕು ಎಂಬ ಚಿಂತನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ನಿರ್ಧಾರದಿಂದಾಗಿ ಪೊಲೀಸ್ ಇಲಾಖೆಯಲ್ಲಿ ಸಾವಿರಾರು ಮ್ಯಾನ್ ಪವರ್ ಉಳಿಯಲಿದೆ. ಇಲ್ಲವಾದರೆ ಅಂಚೆ ಕಚೇರಿ ಮೂಲಕ ಮಾಡುವ ಚಿಂತನೆ ಇದೆ. ಪೋಸ್ಟ್ ಆಫೀಸ್‌ಗಳಿಗೆ ಸ್ವಲ್ಪ ಹಣ ಕೊಟ್ಟು ಮಾಡಿಸಬೇಕಿದೆ. ಪೊಲೀಸರಿಗೆ ಗನ್ ಸೇರಿದಂತೆ ಎಲ್ಲಾ ತರಬೇತಿ ಕೊಟ್ಟಿರುತ್ತೇವೆ. ಅವರನ್ನು ಪೋಸ್ಟ್‌ಮೆನ್ ಕೆಲಸಕ್ಕೆ ಹಚ್ಚೋದು ಅಷ್ಟು ಒಳ್ಳೆಯದಾಗಲಿಕ್ಕಿಲ್ಲ ಎಂದಿದ್ದಾರೆ.