ಬೆಳಗಾವಿ: ದೇವಸ್ಥಾನದ ಜಾಗಕ್ಕೆ ಸಂಬಂಧಿಸಿದಂತೆ ಎರಡು ಕೋಮುಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿಯ ರಣಕುಂಡಯೆ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ದೇವಸ್ಥಾನದ ಜಾಗದ ವಿಚಾರವಾಗಿ ಇನಾಮದಾರ್ ಕುಟುಂಬ ಹಾಗೂ ಗ್ರಾಮಸ್ಥರ ಮಧ್ಯೆ ವಿವಾದವಿತ್ತು. ದೇವಸ್ಥಾನವಿದ್ದ ಜಾಗವನ್ನು ಸ್ಥಳೀಯರು ಶುಚಿಗೊಳಿಸಿದ್ದಾರೆ. ಅಲ್ಲದೇ, ದೇವಸ್ಥಾನ ಕಟ್ಟಲು ಸಿಮೆಂಟ್, ಇಟ್ಟಿಗೆಯನ್ನು ಯುವಕರು ಜೋಡಿಸಿದ್ದಾರೆ. ಇದಾದ ಬಳಿಕ ಗ್ರಾಮಕ್ಕೆ ರಾತ್ರಿ ಆರು ಜನ ಯುವಕರ ತಂಡ ಆಗಮಿಸಿ, ದೇವಾಲಯ ಧ್ವಂಸ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಪರಿಣಾಮ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಡಿಸಿಪಿ ವಿಕ್ರಮ್ ಆಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯಕ್ಕೆ ಗ್ರಾಮದಲ್ಲಿ ಎರಡು ಕೋಮುಗಳ ನಾಯಕರ ಜೊತೆಗೆ ಡಿಸಿಪಿ ವಿಕ್ರಮ್ ಆಮಟೆ ಶಾಂತಿ ಸಭೆ ಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ರಣಕುಂಡಯೆ ಗ್ರಾಮದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.