ಬೆಳಗಾವಿ: ಕಾಂಗ್ರೆಸ್ನವರಿಗೆ ಚಡ್ಡಿ ಸುಡೋದು ಅಭ್ಯಾಸ ಇದ್ರೆ ನನ್ನ ಚಡ್ಡಿನೂ ಕೊಡ್ತೇನಿ. ಅದನ್ನೂ ಸಹ ಸುಡಲು ಹೇಳಿ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ ಸಂಘಟನೆ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ಸಿಗರಿಗಿಲ್ಲ. ದೇಶಭಕ್ತಿ, ಸಮಾಜಸೇವೆಯನ್ನು ಸಂಘಟನೆ ಜೊತೆಗೆ ನಮಗೆ ಮಾರ್ಗದರ್ಶನವನ್ನ ಸಂಘ ಮಾಡುತ್ತದೆ. ಕಾಂಗ್ರೆಸ್ನವರು ಆರ್ಎಸ್ಎಸ್ ಬಗ್ಗೆ ಮಾತನಾಡುವ ಮೂಲಕ ಸೂರ್ಯನಿಗೆ ಉಗುಳುವ ಪ್ರಯತ್ನ ಮಾಡ್ತಿದ್ದಾರೆ. ಅದು ಅವರ ಮೇಲೆ ಬೀಳುತ್ತದೆ ಎಂದರು.
ಓದಿ: ನಿಮ್ಮ ಚಡ್ಡಿ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಮಾಡಿ, ನಂತರ ಆರ್ಎಸ್ಎಸ್ ಚಡ್ಡಿ ಸುಡುವಂತ್ರಿ : ಪ್ರಲ್ಹಾದ್ ಜೋಶಿ
ನೀವೂ ಕಾಂಗ್ರೆಸ್ಗೆ ಚಡ್ಡಿ ಕೊಡ್ತೀರಾ ಎಂಬ ಮಾಧ್ಯಮದವರ ಪ್ರಶ್ನೆ ವಿಚಾರಕ್ಕೆ, ನಂದೂ ಚಡ್ಡಿ ಕೊಡ್ತೇನಿ.. ಸುಡಾಕ್ ಹೇಳಿ. ಅವರಿಗೆ ಸುಡೋದು ಅಭ್ಯಾಸ ಇದ್ರೆ ನಾವೇನು ಮಾಡೋಕೆ ಆಗುತ್ತೆ. ನಂದ್ ಫೋನ್ ನಂಬರ್ ಕೊಡ್ರಿ ಅವರಿಗೆ. ಯಾವಾಗ ಬೇಕು ಅವಾಗ ನಾನು ನನ್ನ ಚಡ್ಡಿಯನ್ನು ಪರ್ಸನಲ್ ಆಗಿ ಕಳುಹಿಸಿಕೊಡುತ್ತೇನೆ. ಅವಶ್ಯಕತೆ ಬಿದ್ರೆ ನನಗೆ ತಿಳಿಸಿ ಎಂದು ವ್ಯಂಗ್ಯವಾಡಿದರು.
ಆರ್ಎಸ್ಎಸ್ ಬಗ್ಗೆ ಜನರಿಗಿರುವ ಅಭಿಮಾನ ನೋಡಿ ಕಾಂಗ್ರೆಸ್ನವರು ಖಿನ್ನತೆಗೆ ಒಳಗಾಗಿದ್ದಾರೆ. ಪ್ರಧಾನಿ ನೇತೃತ್ವದಲ್ಲಿ ಪ್ರತಿಯೊಂದು ರಾಜ್ಯದಲ್ಲಿ ಒಳ್ಳೆಯ ಸ್ಥಾನಮಾನ ಗಳಿಸಿದ್ದೇವೆ. ಒಂದು ಕಾಲದಲ್ಲಿ ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿತ್ತು. ಇದೀಗ ಪ್ರತಿಪಕ್ಷದ ಸ್ಥಾನವೂ ಸಿಗುತ್ತಿಲ್ಲ. ಅದಕ್ಕಾಗಿ ಕಾಂಗ್ರೆಸ್ ಖಿನ್ನತೆಗೆ ಒಳಗಾಗಿ ಈ ರೀತಿ ಮಾಡ್ತಿದೆ. ಇವತ್ತು ಬಿಜೆಪಿ ಅಧಿಕಾರಕ್ಕೆ ಬರಲು ಆರ್ಎಸ್ಎಸ್ ಕೊಡುಗೆ ಅಪಾರವಾಗಿದೆ. ಅವರ ಆಶೀರ್ವಾದ, ಮಾರ್ಗದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಎಂದು ಸಂಜಯ ಪಾಟೀಲ ಹೇಳಿದರು.