ಬೆಳಗಾವಿ: ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ ಆಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ.
ಮಹಾರಾಷ್ಟ್ರ ಪ್ರವಾಸದ ಬಳಿಕ ಗೋಕಾಕಿಗೆ ಮರಳಿದ್ದ ಜಾರಕಿಹೊಳಿ, ತೀವ್ರ ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ದೃಢಪಟ್ಟಿತ್ತು. ಸೋಂಕು ಕಾಣಿಸಿಕೊಂಡ ಬೆನ್ನಲ್ಲೆ, ಗೋಕಾಕಿನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ನಂತರ ಹೋಂ ಐಸೋಲೇಶನ್ ಆಗಿದ್ದರು. ಹಂತ-ಹಂತವಾಗಿ ಮೂರು ಸಲ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಮೂರು ವರದಿಯೂ ನೆಗೆಟಿವ್ ಬಂದಿದೆ.
ಹೀಗಾಗಿ, ರಮೇಶ್ ಜಾರಕಿಹೊಳಿ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ನಿಶಕ್ತಿ ಹೆಚ್ಚಾಗಿರುವ ಕಾರಣ ಮತ್ತಷ್ಟು ದಿನ ವಿಶ್ರಾಂತಿ ಪಡೆಯುವಂತೆ ರಮೇಶ್ ಜಾರಕಿಹೊಳಿಗೆ ಸಲಹೆ ನೀಡಲಾಗಿದೆ ಎಂದು ಗೋಕಾಕ ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ರವೀಂದ್ರ ಅಂಟೀನ್ ಮಾಹಿತಿ ನೀಡಿದ್ದಾರೆ.
ರಾಸಲೀಲೆ ಸಿ.ಡಿ ಪ್ರಕರಣ ಸಂಬಂಧ ಏಪ್ರಿಲ್ 20ರಂದು ಸಂಜೆ 4ಕ್ಕೆ ವಿಚಾರಣೆಗೆ ಹಾಜರಾಗುವಂತೆ ಕೆಲ ದಿನಗಳ ಹಿಂದೆಯೇ ರಮೇಶ್ ಜಾರಕಿಹೊಳಿಗೆ ಎಸ್ಐಟಿ ನೋಟಿಸ್ ನೀಡಿತ್ತು. ನಾಳೆ ಎಸ್ಐಟಿ ಮುಂದೆ ಅವರು ಹಾಜರಾಗ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.
ಇದನ್ನೂ ಓದಿ: ಲಾಕ್ಡೌನ್ ಭಯ : ಬೆಂಗಳೂರು ತೊರೆಯುತ್ತಿರುವ ವಲಸೆ ಕಾರ್ಮಿಕರು