ಬೆಂಗಳೂರು: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿರುವ ವಿಷಯ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿತು. ಇದೇ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆದು ಕೆಲಕಾಲ ಸದನವನ್ನು ಮುಂದೂಡಿದ ಪ್ರಸಂಗ ನಡೆಯಿತು.
ಶೂನ್ಯ ವೇಳೆಯಲ್ಲಿ ಶಾಸಕ ಡಾ.ಅನ್ನದಾನಿ ವಿಷಯ ಪ್ರಸ್ತಾಪಿಸಿ, ಪ್ರತಿ ಅಧಿವೇಶನದ ಸಂದರ್ಭದಲ್ಲಿ ಎಂಇಎಸ್‍ನವರು ಕನ್ನಡಿಗರ ಭಾವನೆಗಳನ್ನು ಕೆರಳಿಸುತ್ತಾರೆ. ನಾವು ಉದಾರಿಗಳು ಮೃದು ಸ್ವಭಾವದವರು ಎಂಬ ಕಾರಣಕ್ಕೆ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೂರಾರು ವರ್ಷಗಳ ಇತಿಹಾಸವಿರುವ ಕನ್ನಡದ ಬಾವುಟಕ್ಕೆ ಬೆಂಕಿ ಹಚ್ಚುವುದೆಂದರೆ ನನ್ನ ತಾಯಿಗೆ ಬೆಂಕಿ ಹಚ್ಚಿದಂತೆ. ನಾವು ಸೌಮ್ಯ ಸ್ವಭಾವದವರು ಯಾವುದೇ ಭಾಷೆಗೆ, ಧರ್ಮಕ್ಕೆ ತೊಂದರೆ ಕೊಡುವುದಿಲ್ಲ. ಆದರೆ ನಮ್ಮ ಸಹನೆಯನ್ನೇ ಕೆಲವರು ಬಂಡವಾಳ ಮಾಡಿಕೊಂಡು ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದಾರೆ. ಇದನ್ನು ಸಹಿಸಬೇಕೆ ಎಂದು ಪ್ರಶ್ನಿಸಿದರು.
ಕಿಡಿಗೇಡಿ ಕೆಲಸದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯ
ಈ ಹಿಂದೆಯೂ ಎಂಇಎಸ್‍ನವರು ಗಡಿ ವಿವಾದವನ್ನು ತೆಗೆದುಕೊಂಡು ಕನ್ನಡಿಗರ ಮೇಲೆ ಸವಾರಿ ಮಾಡುತ್ತಿದ್ದರು. ಈಗ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದಾರೆಂದರೆ ಸಹಿಸಲು ಸಾಧ್ಯವೇ. ಈ ಕಿಡಿಗೇಡಿ ಕೆಲಸ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಆಡಳಿತ ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ
ಈ ವೇಳೆ ಕಂದಾಯ ಸಚಿವ ಆರ್.ಅಶೋಕ್ ಸರ್ಕಾರದ ಪರವಾಗಿ ಉತ್ತರ ನೀಡಲು ಮುಂದಾದಾಗ, ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಉಂಟಾಯಿತು. ಅನ್ನದಾನಿ ಪರವಾಗಿ ಜೆಡಿಎಸ್‍ನ ಎಲ್ಲ ಶಾಸಕರು ಬೆಂಬಲಕ್ಕೆ ನಿಂತು ಕನ್ನಡಿಗರನ್ನು ಕೆಣಕುತ್ತಿರುವ ಎಂಇಎಸ್‍ನ ಪುಂಡಾಟಕೆಗೆ ಕಡಿವಾಣ ಹಾಕಬೇಕು. ನಮ್ಮ ಸಹನೆಯನ್ನೇ ದೌರ್ಬಲ್ಯವೆನ್ನಬಾರದು. ಸರ್ಕಾರ ಈ ಅಧಿವೇಶನದಲ್ಲಿ ಅವರಿಗೆ ಸರಿಯಾದ ಸಂದೇಶವನ್ನು ಕೊಡಬೇಕೆಂದು ಆಗ್ರಹಿಸಿದರು.
ಆಗ ಸಚಿವ ಅಶೋಕ್ ಅವರು ಉತ್ತರಿಸಲು ಮುಂದಾಗುತ್ತಿದ್ದಂತೆ ಜೆಡಿಎಸ್‍ನ ಎಲ್ಲ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸಲು ಮುಂದಾದರು. ಇದಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿ, ಉತ್ತರ ನೀಡುವುದಕ್ಕೂ ಮುನ್ನವೇ ಈ ರೀತಿ ವರ್ತಿಸುವುದು ಸರಿಯಲ್ಲ. ಸರ್ಕಾರ ಏನು ಹೇಳುತ್ತದೆ ಎಂಬುದನ್ನು ಕೇಳಿಸಿಕೊಳ್ಳಿ ಎಂದರು. ಆದರೆ ಜೆಡಿಎಸ್‍ನ ಯಾವ ಶಾಸಕರೂ ಕೂಡ ಇದಕ್ಕೆ ಕಿವಿಗೊಡದೇ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಇದೇ ವೇಳೆ ಕಾಂಗ್ರೆಸ್ ಸದಸ್ಯರು, ಸುವರ್ಣಸೌಧದ ಮುಂಭಾಗದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಮತ್ತಿತರರ ನಾಯಕರನ್ನು ಅಧಿವೇಶನಕ್ಕೆ ಬಿಡದೆ ತಡೆ ಹಿಡಿಯಲಾಗಿದೆ. ಅವರನ್ನು ಒಳಗೆ ಬಿಡುವಂತೆ ಸಭಾಧ್ಯಕ್ಷರು ನಿರ್ದೇಶನ ನೀಡಬೇಕೆಂದು ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಲು ಮುಂದಾದರು. ಆಗ ಮತ್ತಷ್ಟು ಗೊಂದಲ ಉಂಟಾಯಿತು.
ಯಾರು ಏನು ಹೇಳುತ್ತಿದ್ದಾರೆ ಎಂಬುದೇ ಗೊತ್ತಾಗಲಿಲ್ಲ. ಸ್ಪೀಕರ್ ಕಾಗೇರಿಯವರು ಕುಳಿತುಕೊಳ್ಳುವಂತೆ ಪದೇ ಪದೆ ಮನವಿ ಮಾಡಿಕೊಂಡರೂ ಸದಸ್ಯರು ಪಟ್ಟು ಬಿಡದ ಕಾರಣ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.
ಮುಂದುವರಿದ ಧರಣಿ:
ಊಟದ ವಿರಾಮದ ಬಳಿಕ ಸದನ ಆರಂಭವಾಗುತ್ತಿದ್ದಂತೆ ಮತ್ತೆ ಈ ವಿಚಾರವನ್ನು ಪ್ರಸ್ತಾಪಿಸಿದ ಜೆಡಿಎಸ್ ಶಾಸಕರು, ಎಂಇಎಸ್‌ಗೆ ಕಪ್ಪು ಮಸಿ ಹಾಕಿದ್ದಕ್ಕೆ ಕನ್ನಡದ ಅಭಿಮಾನಿಯನ್ನು ಬಂಧನ ಮಾಡಲಾಗಿದೆ. ಆದರೆ, ಕನ್ನಡ ಬಾವುಟ ಸುಟ್ಟ ಶಿವಸೇನೆ, ಎಂಇಎಸ್ ಪುಂಡರನ್ನು ಬಂಧಸಿದ್ದಾರಾ? ಎಂದು ಪ್ರಶ್ನೆ ಮಾಡಿದರು. ಅಷ್ಟೇ ಅಲ್ಲದೆ, ಸದನದ ಬಾವಿಗಿಳಿದು ಅನ್ನದಾನಿ ಹಾಗೂ ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕನ್ನಡ ಬಾವುಟಕ್ಕೆ ಮಹಾರಾಷ್ಟ್ರದಲ್ಲಿ ಬೆಂಕಿ ಇಟ್ಟ ವಿಚಾರವಾಗಿ ಖಂಡನಾ ನಿರ್ಣಯ ಮಂಡಿಸುವಂತೆ ಆಗ್ರಹಿಸಿದರು. ಈ ಘಟನೆ ಖಂಡಿಸುತ್ತೇನೆ ಎಂದ ಸಿದ್ದರಾಮಯ್ಯ, ಖಂಡನಾ ನಿರ್ಣಯ ಮಾಡಿ ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರಕ್ಕೆ ಕಳಿಸೋಣ. ಈ ಮೂಲಕ ಕಿಡಿಗೇಡಿಗಳಿಗೆ ಶಿಕ್ಷೆಗೆ ಆಗ್ರಹಿಸೋಣ ಎಂದು ಒತ್ತಾಯಿಸಿದರು.
ಸರ್ಕಾರದ ಪರವಾಗಿ ಉತ್ತರ ನೀಡಿದ ಸಚಿವ ಆರ್. ಅಶೋಕ್, ಈ ಘಟನೆಯಿಂದ ಕನ್ನಡಿಗರಿಗೆ ನೋವು ತಂದಿದೆ. ಯಾವುದೇ ಸರ್ಕಾರ ಇರಲಿ, ನೆಲ, ಜಲ, ಭಾಷೆ ಹಾಗೂ ರಕ್ಷಣೆ ನಮ್ಮ ಜವಾಬ್ದಾರಿ ಎಂದರು.
ಶಿವಸೇನೆ, ಎಂಇಎಸ್ ಗಡಿ ಭಾಗದಲ್ಲಿ ಪುಂಡಾಟಿಕೆ ಮಾಡ್ತಿದೆ, ನಮ್ಮ ನೆಲದಲ್ಲಿ ಆದರೆ ಇಂತವರಿಗೆ ಶಿಕ್ಷೆ ಕೊಡುತ್ತಿದ್ದೆವು . ಈಗ ಖಂಡನಾ ನಿರ್ಣಯದ ಮೂಲಕ ಶಿಕ್ಷೆಗೆ ಒತ್ತಾಯಿಸೋಣ. ಇಂತಹ ಘಟನೆ ಸೌಹಾರ್ದ ಕದಡಲು ಕಾರಣ ಆಗುತ್ತದೆ. ಈ ಬಗ್ಗೆ ಮಹಾರಾಷ್ಟ್ರದ ಸರ್ಕಾರದ ಜೊತೆ ಮಾತನಾಡುತ್ತೇವೆ ಎಂದ ಅವರು, ಖಂಡನಾ ನಿರ್ಣಯಕ್ಕೆ ನಾವು ಬೆಂಬಲ ಸೂಚಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಸಿಟಿ ರವಿಗೆ ಲೂಟಿ ರವಿ ಎಂದ ಡಿಕೆಶಿ: ಡಿಕೆಯಲ್ಲ ಕೆಡಿ ಎಂದು ತಿರುಗೇಟು ನೀಡಿದ ಸಿಟಿ ರವಿ