ಚಿಕ್ಕೋಡಿ (ಬೆಳಗಾವಿ): ತಾಲೂಕಿನ ಕಾರದಗಾ ಗ್ರಾಮದ ಪಸಾರೆ ರೈತರು ಪ್ರಸಕ್ತ ಹಂಗಾಮಿನಲ್ಲಿ ಎರಡು ಎಕರೆ ಭೂಮಿಯಲ್ಲಿ ಸುಮಾರು 20 ಅಡಿ ಎತ್ತರದ 240 ಟನ್ ಕಬ್ಬು ಬೆಳೆದು ದಾಖಲೆ ನಿರ್ಮಿಸಿದ್ದಾರೆ.
ಕಾರದಗಾ ಗ್ರಾಮದ ಪ್ರಗತಿಪರ ರೈತ ಲಕ್ಷ್ಮಣ ಪಸಾರೆ ಮತ್ತು ಭಾವು ಸಾಹೇಬ ಎಂಬುವರು 20 ಅಡಿ ಎತ್ತರದ 240 ಟನ್ ಕಬ್ಬು ಬೆಳೆದಿದ್ದಾರೆ. ಪಸಾರೆಯವರು ಹೊಸ ತಂತ್ರಜ್ಞಾನ ಮತ್ತು ಸಾವಯವ ಗೊಬ್ಬರ ಬಳಸಿ ಒಂದು ಎಕರೆಯಲ್ಲಿ 86,032 ತಳಿಯ ಕಬ್ಬನ್ನು ಬೆಳೆದಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ರೈತ ಲಕ್ಷ್ಮಣ ಪಸಾರೆ, ಹನಿ ನೀರಾವರಿ ಯೋಜನೆಯಲ್ಲಿ 10 ಟ್ರಕ್ ಸಗಣಿ ಗೊಬ್ಬರ ಮಿಶ್ರಣ ಮಾಡಿ, 5 ಅಡಿ ಸಾಲು ತಯಾರಿಸಿ 1.50 ಅಡಿ ಅಂತರದಲ್ಲಿ ನಾಟಿ ಮಾಡಿದ್ದೆವು.
ಡಿಎಪಿ ಪೋಟ್ಯಾಶ್ ಗೊಬ್ಬರ ಬಳಸಿ, ಸರಿಯಾದ ವೇಳೆಗೆ ಕೀಟನಾಶಕ ಔಷಧಿಗಳನ್ನು ಸಿಂಪಡಿಸಿದ್ದರಿಂದ ಹೆಚ್ಚು ಉತ್ಪಾದನೆ ಮಾಡಲು ಸಾಧ್ಯವಾಯಿತು. ಒಂದು ಕಬ್ಬಿನ ಎತ್ತರ 20 ಅಡಿಯಿದ್ದು, ನಾಲ್ಕು ಕೆಜಿ ತೂಕವಿದೆ. ಎರಡು ಎಕರೆಗೆ 2 ಲಕ್ಷ ರೂ. ಖರ್ಚು ಮಾಡಲಾಗಿದ್ದು, ಖರ್ಚು ಹೋಗಿ ಸುಮಾರು 5 ಲಕ್ಷ ರೂ. ಲಾಭವಾಗಲಿದೆ ಎಂದರು.