ಅಥಣಿ: ಪ್ರತಿ ವರ್ಷ ದೀಪಾವಳಿ ಬಂದರೆ ಸಾಕು, ಹಬ್ಬಾಚರಿಸಲು ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡುತ್ತಾರೆ ಈ ರೈತ ದಂಪತಿ. ಹೌದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಹಳ್ಳಿಯೊಂದರಲ್ಲಿ ಪಡನಾಡ ದಂಪತಿ ಬಡವರ ಮನೆಗಳಲ್ಲಿ ದೀಪ ಬೆಳಗಿಸುವ ಮಾನವೀಯ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮಹಾವೀರ ಪಡನಾಡ ಮತ್ತು ಕಲ್ಪನಾ ಮಹಾವೀರ ಪಡನಾಡ ದಂಪತಿಗೆ ಮಕ್ಕಳಿಲ್ಲ. ಇವರು ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಬಡವರನ್ನು ತಮ್ಮ ಕುಟುಂಬದವರೆಂದು ಪರಿಗಣಿಸಿ 5 ಲಕ್ಷದಿಂದ 7 ಲಕ್ಷ ಹಣ ವ್ಯಯಿಸಿ ಸಹಾಯಹಸ್ತ ಚಾಚುತ್ತಿದ್ದಾರೆ.
ನೂರಾರು ಕುಟುಂಬಗಳಿಗೆ ಹಣ, ಆಹಾರ, ಬಟ್ಟೆ ಮತ್ತು ಇತರೆ ಅಗತ್ಯ ವಸ್ತುಗಳನ್ನು ಇವರು ನೀಡುತ್ತಾರೆ. ಅಷ್ಟೇ ಅಲ್ಲ, ದೀಪಾವಳಿಯ ನಂತರ ಮದುವೆಗಳು ನಡೆಯುವ ಕಾರಣ ಚಿನ್ನದ ಆಭರಣಗಳೊಂದಿಗೆ ಇತರೆ ಸಹಾಯವನ್ನು ಬಡ ಕುಟುಂಬಗಳ ಹೆಣ್ಣುಮಕ್ಕಳಿಗೆ ನೀಡಲಾಗುತ್ತದೆ. ಪ್ರತಿ ದೀಪಾವಳಿಯ ದಿನದಂದು ಬಡವರ ಮನೆಗಳಲ್ಲಿ ಸಂಭ್ರಮ ನೆಲೆಸಲಿ, ಕನಿಷ್ಠ ಪಕ್ಷ ಅವರ ಜೀವನದಲ್ಲಿ ಬಡತನವು ಕರಿಛಾಯೆಯಾಗದಿರಲಿ ಎಂಬುದೇ ಪಡನಾಡ ದಂಪತಿ ಸಂಕಲ್ಪವಾಗಿದೆ.
ಇದನ್ನೂ ಓದಿ: ಕಲುಷಿತ ನೀರು ಸೇವಿಸಿ ಇಬ್ಬರು ಸಾವು ಆರೋಪ: ಮುದ್ದೇಬಿಹಾಳ ಆರೋಗ್ಯಾಧಿಕಾರಿ ಸ್ಪಷ್ಟನೆ ಹೀಗಿದೆ..