ಬೆಳಗಾವಿ : ನಾವು ಕೇಳಿದ್ದು ಖಾಯಂ ಸೇವೆ, ಸರ್ಕಾರ ಕೊಟ್ಟಿದ್ದು 6ನೇ ವೇತನ ನೀಡುವ ಭರವಸೆ. ಹೀಗಾಗಿ, ಸರ್ಕಾರ ಕೊಟ್ಟ ಭರವಸೆ ಈಡೇರಿಸುವ ತನಕ ಮುಷ್ಕರದಿಂದ ಹಿಂದೆ ಸರಿಯಲ್ಲ ಎಂದು ಸಾರಿಗೆ ನೌಕರರ ಕುಟುಂಬಸ್ಥರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ನಗರದ ಡಿಸಿ ಕಚೇರಿ ಎದುರಿಗೆ ತಮ್ಮ ಮಕ್ಕಳೊಂದಿಗೆ ಆಗಮಿಸಿದ್ದ ಸಾರಿಗೆ ನೌಕರರ ಕುಟುಂಬಸ್ಥರು, ತಟ್ಟೆ ಬಾರಿಸಿ ವಿನೂತನ ಪ್ರತಿಭಟನೆ ನಡೆಸಿ ಸರ್ಕಾರದ ನಿರ್ಧಾರವನ್ನು ಖಂಡಿಸಿದರು. ಕಳೆದ ಆರು ದಿನಗಳಿಂದ ನಡೆಯುತ್ತಿರುವ ಸಾರಿಗೆ ನೌಕರರ ಪ್ರತಿಭಟನೆ ಅಂತ್ಯವಾಗುವ ಲಕ್ಷಣಗಳು ಕಾಣುತ್ತಿಲ್ಲ.
ಇಂದು ಸಾರಿಗೆ ನೌಕರರ ಪತ್ನಿಯರು, ತಮ್ಮ ಮಕ್ಕಳೊಂದಿಗೆ ತಟ್ಟೆ ಬಾರಿಸಿ ಆಕ್ರೋಶ ಹೊರ ಹಾಕಿದರು. ಈ ವೇಳೆ ಆರನೇ ವೇತನ ಆಯೋಗ ಜಾರಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಈ ವೇಳೆ ಮಾತನಾಡಿದ ಸಾರಿಗೆ ನೌಕರನ ಪತ್ನಿ ಕಾವೇರಿ, 6ನೇ ವೇತನ ಜಾರಿಗೆ ಮಾಡಬೇಕೆಂದು ಕೈಮುಗಿದು ಕೇಳಿಕೊಳ್ಳುತ್ತೇವೆ. ಆದಷ್ಟು ಬೇಗ ಸವದಿ ಹಾಗೂ ಯಡಿಯೂರಪ್ಪನವರು ಒಂದು ತೀರ್ಮಾನಕ್ಕೆ ಬರಬೇಕು. ನಮ್ಮ ಕಷ್ಟ ಅರ್ಥ ಮಾಡಿಕೊಳ್ಳಬೇಕು.
ಜೀವನ ನಡೆಸುವುದು ಕಷ್ಟವಾಗಿದೆ. ಕಳೆದ ಬಾರಿ ಪ್ರತಿಭಟನೆ ನಡೆದಾಗ ಸರ್ಕಾರ 6ನೇ ವೇತನ ಆಯೋಗ ಜಾರಿ ಮಾಡುತ್ತೇವೆ ಎಂದು ಒಪ್ಪಿಗೆ ಸೂಚಿಸಿ ಮೂರು ತಿಂಗಳು ಗಡುವು ನೀಡಿತ್ತು. ಆದರೀಗ ಜಾರಿಗೆ ತರೋದಿಲ್ಲ ಅಂತಿದೆ. ಜಾರಿಗೆ ತರುವವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ ಎಂದರು.