ಚಿಕ್ಕೋಡಿ: ಲಾಕ್ಡೌನ್ ಹಿನ್ನೆಲೆ ಸಂಪೂರ್ಣವಾಗಿ ಮದ್ಯ ಮಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ಮದ್ಯ ವ್ಯಸನಿಗಳು ಕಳ್ಳಭಟ್ಟಿಯ ಹಾದಿ ಹಿಡಿದಿದ್ದಾರೆ. ಹೀಗಾಗಿ ಕಳ್ಳಭಟ್ಟಿ ದಂಧೆಕೋರರ ಸೆದೆಬಡಿಯಲು ಅಬಕಾರಿ ಪೊಲೀಸರು ಡ್ರೋನ್ ಕ್ಯಾಮರಾ ಮೊರೆ ಹೋಗಿದ್ದಾರೆ.
ಡ್ರೋನ್ ಕ್ಯಾಮರಾ ಬಳಕೆಯಿಂದ ಗುಡ್ಡಗಾಡು ಪ್ರದೇಶ, ನದಿ ದಡದ ಪ್ರದೇಶ ಸೇರಿದಂತೆ ಕೆಲ ಸೂಕ್ಷ್ಮ ಪ್ರದೇಶಗಳ ಮೇಲೂ ಹದ್ದಿನ ಕಣ್ಣಿಡಲು ಸಹಾಯವಾಗಲಿದೆ. ಅಷ್ಟೇ ಅಲ್ಲದೇ ದಂಧೆಕೋರರ ರಸ್ತೆ ಮಾರ್ಗ, ಅವರ ಚಲನವಲಗಳ ಮೇಲೆ ದೃಷ್ಟಿ ಹಾಯಿಸಲು ಸಾಕಷ್ಟು ಅನುಕೂಲವಾಗಲಿದೆ.
ಚಿಕ್ಕೋಡಿ ಉಪವಿಭಾಗದ ರಾಯಬಾಗ, ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ ತಾಲೂಕಿನ ಗುಡ್ಡಗಾಡು ಪ್ರದೇಶ ಹಾಗೂ ನದಿ ದಡದಲ್ಲಿ ಕಳ್ಳಭಟ್ಟಿ ತಯಾರಿಕೆ ಅಡ್ಡೆಗಳು ಹೆಚ್ಚಾಗುತ್ತಿವೆ. ಡ್ರೋನ್ ಕ್ಯಾಮರಾ ನೀಡುವ ಮಾಹಿತಿ ಮೇರೆಗೆ ದಾಳಿ ನಡೆಸಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಹಾಯವಾಗುತ್ತದೆ ಅಂತಾರೆ ಅಬಕಾರಿ ಇಲಾಖೆ ಅಧಿಕಾರಿಗಳು.
ಇನ್ನು, ಜಿಲ್ಲಾದ್ಯಂತ ಈಗಾಗಲೇ 530 ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ, 63 ಅಬಕಾರಿ ಪ್ರಕರಣಗಳನ್ನು ದಾಖಲಿಸಿಕೊಂಡು 34 ಆರೋಪಿಗಳನ್ನು ಬಂಧಿಸಲಾಗಿದೆ. ಸುಮಾರು 74 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಮದ್ಯ, ಕಳ್ಳಭಟ್ಟಿ ಸಾರಾಯಿ ಹಾಗೂ ವಾಹನಗಳನ್ನು ಜಪ್ತಿ ಮಾಡಲಾಗಿದೆ.