ಬೆಳಗಾವಿ: ನಾವು ರಾಜೀನಾಮೆ ಕೇಳಿಲ್ಲ, ಅದು ಸರ್ಕಾರಕ್ಕೆ ಬಿಟ್ಟಿದ್ದು. ಪ್ರಕರಣದ ಕುರಿತು ಎಫ್ಐಆರ್ ದಾಖಲಾಗಿದೆ, ಆರೋಪಿಗಳ ಬಂಧನ ಆಗಬೇಕು. ಕೆ.ಎಸ್.ಈಶ್ವರಪ್ಪ ಬಂಧನ ಆಗಬೇಕು ಎಂದು ಮೃತ ಸಂತೋಷ ಸಹೋದರ ಪ್ರಶಾಂತ್ ಪಾಟೀಲ್ ಆಗ್ರಹಿಸಿದ್ದಾರೆ. ಶುಕ್ರವಾರ ರಾಜೀನಾಮೆ ನೀಡುವ ಬಗ್ಗೆ ಈಶ್ವರಪ್ಪ ಘೋಷಿಸಿದ ಬೆನ್ನಲ್ಲೇ ಸಂತೋಷ ಸಹೋದರ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿ ತಾಲೂಕಿನ ಬಡಸ ಕೆ.ಹೆಚ್.ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಶಾಂತ್ ಪಾಟೀಲ್, ನನ್ನ ತಮ್ಮ ಮಾಡಿದ ಕಾಮಗಾರಿಯ ಬಿಲ್ 4 ಕೋಟಿ 12 ಲಕ್ಷ ರೂ. ಪಾವತಿ ಮಾಡಬೇಕು. ನನ್ನ ತಮ್ಮನ ಪತ್ನಿಗೆ ಸರ್ಕಾರಿ ನೌಕರಿ, ಸೂಕ್ತ ಪರಿಹಾರ ಕೊಡಬೇಕು. ಎಫ್ಐಆರ್ ದಾಖಲಾದ ಪ್ರಕಾರ ಎ1, ಎ2, ಎ3 ಆರೋಪಿಗಳ ಬಂಧನ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದು, ಈಶ್ವರಪ್ಪ ರಾಜೀನಾಮೆ ಹಾಗೂ ಬಂಧನಕ್ಕೆ ತೀವ್ರ ಒತ್ತಡ ಕೇಳಿಬಂದಿದೆ. ಇನ್ನು ಈಶ್ವರಪ್ಪ ಅವರನ್ನು ಬಂಧಿಸಲೇಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಉಡುಪಿಯಲ್ಲಿ ಸಂತೋಷ ಪಾಟೀಲ ಅವರು ವಾಟ್ಸಾಪ್ ಮೂಲಕ ಮಾಧ್ಯಮಗಳಿಗೆ ಡೆತ್ ನೋಟ್ ಕಳಿಸಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕೆ.ಎಸ್.ಈಶ್ವರಪ್ಪ