ಬೆಳಗಾವಿ: ಇಲ್ಲಿನ ಡಿಸಿಸಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಾಳೆ ನಡೆಯಲಿದ್ದು, ಒಮ್ಮತದ ಅಭ್ಯರ್ಥಿ ಆಯ್ಕೆ ಸಂಬಂಧ ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರು ಮಹತ್ವದ ಸಭೆ ನಡೆಸುತ್ತಿದ್ದಾರೆ.
ಬೆಳಗಾವಿ ಪ್ರವಾಸಿ ಮಂದಿರದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಶಾಸಕ ಉಮೇಶ್ ಕತ್ತಿ, ಬ್ಯಾಂಕ್ ಹಾಲಿ ಅಧ್ಯಕ್ಷ ರಮೇಶ್ ಕತ್ತಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉಪಸ್ಥಿತರಿದ್ದಾರೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಯಾರಾಗಬೇಕು ಎಂಬ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ರಮೇಶ್ ಕತ್ತಿ ಮತ್ತೊಂದು ಅವಧಿಗೆ ಮುಂದುವರೆಯಲಿ ಎಂದು ಸಚಿವ ರಮೇಶ್ ಜಾರಕಿಹೊಳಿ ಇಂಗಿತ ವ್ಯಕ್ತಪಡಿಸಿದ್ದಾರೆ. ಸಹೋದರನಿಗೆ ಮತ್ತೊಂದು ಅವಕಾಶ ನೀಡಬೇಕು ಎಂದು ಶಾಸಕ ಉಮೇಶ್ ಕತ್ತಿ ಪಟ್ಟು ಹಿಡಿದಿದ್ದಾರೆ. ಆದರೆ ರಮೇಶ್ ಕತ್ತಿ ಆಯ್ಕೆಗೆ ಕೆಲ ನಿರ್ದೇಶಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ. ವಿರೋಧ ವ್ಯಕ್ತಪಡಿಸುತ್ತಿರುವ ನಿರ್ದೇಶಕರನ್ನು ನನ್ನ ಮುಂದೆ ಕರೆಯಿಸಿ ಎಂದು ಉಮೇಶ್ ಕತ್ತಿ ಹಾಗೂ ರಮೇಶ್ ಕತ್ತಿ ಸಭೆಯಲ್ಲಿ ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ.