ಬೆಳಗಾವಿ: ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಯಿಂದಾಗಿ ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿದೆ. ಈ ಹಿನ್ನೆಲೆ ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ್ ನೇತೃತ್ವದಲ್ಲಿ ನಯಾನಗರದ ಸುಖದೇವಾನಂದ ಪುಣ್ಯಾಶ್ರಮ ಪೀಠಾಧಿಪತಿ ಅಭಿನವ ಸಿದ್ದಲಿಂಗೇಶ್ವರ ಸ್ವಾಮೀಜಿಗಳ ಸಮ್ಮುಖದಲ್ಲಿ ಮಲಪ್ರಭಾ ನದಿಗೆ ಬಾಗಿನ ಅರ್ಪಿಸಲಾಯಿತು.
ತಾಲೂಕಿನ ನಯಾನಗರ ಗ್ರಾಮದಿಂದ ಸುಮಾರು 2 ಕಿಲೋ ಮೀಟರ್ ಪಾದಯಾತ್ರೆಯ ಮೂಲಕ ಮಲಪ್ರಭಾ ನದಿಯವರೆಗೆ ಭಜನಾ ಪದಗಳನ್ನು ಹಾಡುತ್ತಾ ಪಾದಯಾತ್ರೆಯಲ್ಲಿ ವಿಶ್ವನಾಥ್ ಪಾಟೀಲ್ ತಮ್ಮ ನೂರಾರು ಅಭಿಮಾನಿಗಳೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಮಳೆಯ ಪ್ರಮಾಣ ಕಡಿಮೆ ಆಗಿರುವುದರಿಂದ ಮಲಪ್ರಭಾ ನದಿಗೆ ಒಳಹರಿವು ತಗ್ಗಿದ್ದು, ನದಿ ಪಾತ್ರದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿರುವ ಕಾರಣ ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.