ಬೆಳಗಾವಿ : ವಾಯವ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಡಾ. ಪ್ರಭಾಕರ ಕೋರೆ ಪುತ್ರಿ ಕಣಕ್ಕಿಳಿಯುವ ಕುರಿತಾದ ಚರ್ಚೆಗಳು ಗರಿಗೆದರಿವೆ.
ಕೆಎಲ್‌ಇ ಕಾರ್ಯಾಧ್ಯಕ್ಷರಾಗಿರುವ ಡಾ.ಪ್ರಭಾಕರ್ ಕೋರೆ, ರಾಜ್ಯಸಭಾ ಮಾಜಿ ಸದಸ್ಯರು ಹೌದು. ಕೆಎಲ್‌ಇ ದಂತ ವಿಜ್ಞಾನ ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿರುವ ಪ್ರಭಾಕರ ಕೋರೆ ಪುತ್ರಿ ಡಾ.ಪ್ರೀತಿ ಕೋರೆ ಅವರು, ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಚರ್ಚೆಗಳು ನಡೆದಿವೆ.
ಬೆಳಗಾವಿ ಜಿಲ್ಲೆಯವರಿಗೆ ಬಿಜೆಪಿ ಟಿಕೆಟ್ ನೀಡದಿರುವುದ್ದಕ್ಕೆ ಆಕ್ರೋಶ ಭುಗಿಲೆದ್ದಿದೆ. ಹಾಲಿ ಎಂಎಲ್‌ಸಿ ಅರುಣ್ ಶಹಾಪುರ್‌ಗೆ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನ ಸ್ಫೋಟಗೊಂಡಿದೆ. ಬೆಳಗಾವಿಯಲ್ಲಿ ಸಭೆ ಸೇರಿದ ಎರಡು ಸಾವಿರಕ್ಕೂ ಹೆಚ್ಚು ಶಿಕ್ಷಕರು, ಬೆಳಗಾವಿ ಜಿಲ್ಲೆಯವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ.
ಬೆಳಗಾವಿ ಜಿಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಹಾಗೂ ನೌಕರರ ಒಕ್ಕೂಟದಿಂದ ನಡೆದ ಸಭೆಯಲ್ಲಿ ಬೆಳಗಾವಿ ಜಿಲ್ಲೆಯವರಿಗೇ ಟಿಕೆಟ್ ನೀಡುವಂತೆ ಒಕ್ಕೊರಲಿನ ಆಗ್ರಹ ವ್ಯಕ್ತವಾಯಿತು.
ಈಗಾಗಲೇ ಘೋಷಣೆ ಮಾಡಿದ ಟಿಕೆಟ್ ವಾಪಸ್ ಪಡೆದು ಬೆಳಗಾವಿ ಜಿಲ್ಲೆಯವರಿಗೆ ಟಿಕೆಟ್ ಕೊಟ್ಟರೆ ಸ್ವಾಗತ. ಇಲ್ಲವಾದ್ರೆ ಬೆಳಗಾವಿ ಜಿಲ್ಲೆಯ ಎಲ್ಲ ಶಿಕ್ಷಕರು ಸೇರಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಿ ಪಕ್ಷೇತರ ಅಭ್ಯರ್ಥಿಯನ್ನ ಕಣಕ್ಕಿಳಿಸುತ್ತೇವೆ. ಈಗಾಗಲೇ ಐವರು ಆಕಾಂಕ್ಷಿಗಳು ಪಕ್ಷೇತರರಾಗಿ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಪ್ರೌಢಶಾಲೆ ಸಹಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಮು ಗುಗವಾಡ, ಬೆಳಗಾವಿ ಜಿಲ್ಲಾ ಪ್ರೌಢಶಾಲೆ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಎಸ್.ಎಸ್.ಮಠದ ಸೇರಿ ಐವರು ಆಕಾಂಕ್ಷಿಗಳಿದ್ದಾರೆ. ಐವರು ಆಕಾಂಕ್ಷಿಗಳ ಪಟ್ಟಿಯಲ್ಲಿ ಸದ್ಯಕ್ಕೆ ಡಾ.ಪ್ರೀತಿ ಕೋರೆ ಹೆಸರಿಲ್ಲ.
ವಾಯವ್ಯ ಶಿಕ್ಷಕರ ಕ್ಷೇತ್ರ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯನ್ನು ಒಳಗೊಂಡಿದೆ. ಮೂರು ಜಿಲ್ಲೆಗಳ ಪೈಕಿ ಶೇ. 55ರಷ್ಟು ಮತದಾರರು ಬೆಳಗಾವಿ ಜಿಲ್ಲೆಯವರಿದ್ದಾರೆ. ಹೀಗಾಗಿ, ಬೆಳಗಾವಿ ಜಿಲ್ಲೆಯವರಿಗೆ ಟಿಕೆಟ್ ನೀಡುವಂತೆ ಶಿಕ್ಷಕರು ಒತ್ತಾಯಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಶಿಕ್ಷಕರು ಡಾ. ಪ್ರಭಾಕರ ಕೋರೆ ಬೆಂಬಲ ಕೇಳಿದ್ದಾರೆ.
ಕೆಎಲ್‌ಇ ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಶಿಕ್ಷಕರ ಸಹಾಯದಿಂದ ಪುತ್ರಿಯನ್ನು ಎಂಎಲ್‌ಸಿ ಮಾಡಲು ಕೋರೆ ಮುಂದಾಗ್ತಾರಾ? ಎಂಬುದೇ ಸದ್ಯದ ಕುತೂಹಲ. ತಂದೆ ಓಕೆ ಅಂದ್ರೆ ಚುನಾವಣೆಗೆ ನಿಲ್ಲಲು ರೆಡಿ ಎಂದು ಡಾ. ಪ್ರೀತಿ ಕೋರೆ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂಬ ಮಾತು ಕೇಳಿ ಬಂದಿವೆ.
ಇದನ್ನೂ ಓದಿ: ಮಾನವ ಚಟುವಟಿಕೆಗಳಿಂದ ನೈಸರ್ಗಿಕ ವಿಕೋಪಗಳ ಹೆಚ್ಚಳ : ಅಧ್ಯಯನ