ಅಥಣಿ(ಬೆಳಗಾವಿ): ಸಾಮಾನ್ಯವಾಗಿ ಜನರು ಪಾದಯಾತ್ರೆ ಮುಖಾಂತರ ದೇವರ ದರ್ಶನಕ್ಕೆ ತೆರಳುತ್ತಾರೆ. ಆದರೆ ಇಲ್ಲಿ ಸ್ವಾಮಿ ನಿಷ್ಠೆಗೆ ಹೆಸರಾಗಿರುವ ಶ್ವಾನ ಕೂಡ ತನ್ನ ಮಾಲೀಕನೊಂದಿಗೆ ಪಾದಯಾತ್ರೆ ಮೂಲಕ ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ತೆರಳಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದ ಶಂಕ್ರಯ್ಯ ಮಠಪತಿ ಎಂಬುವರಿಗೆ ಸೇರಿದ ಶ್ವಾನ ಕಳೆದ ಏಳು ದಿನಗಳಿಂದ ಮಾಲೀಕರ ಜತೆ ಪಾದಯಾತ್ರೆಯಲ್ಲಿ ಸಾಗುತ್ತಿದೆ.
ರಾಯಚೂರು ಜಿಲ್ಲೆಯ ಕಬ್ಬರ್ ಮಾರ್ಗವಾಗಿ ಪಾದಯಾತ್ರೆ ಹೋಗುತ್ತಿದ್ದಾರೆ. ಅವರ ಜತೆಗೆ ಮನೆಯ ನಾಯಿ ಕೂಡ ಹಿಂಬಾಲಿಸುತ್ತಿದೆ. ಹೋಳಿ ಹುಣ್ಣಿಮೆಯ ದಿನ ಕಾಮನ ದಹನವಾದ ನಂತರ ಉತ್ತರ ಕರ್ನಾಟಕದ ಜನರು ಶ್ರೀಶೈಲ ಪಾದಯಾತ್ರೆ ಕೈಗೊಳ್ಳುವುದು ವಾಡಿಕೆ. ಮಲ್ಲಿಕಾರ್ಜುನ ದರ್ಶನಕ್ಕೆ ಪಾದಯಾತ್ರೆ ಮುಖಾಂತರ ಹೋಗುವಾಗ ಶ್ವಾನ ಹಿಂಬಾಲಿಸಿದೆ. ಮಾಲೀಕ ವಾಪಸ್ ಕಳುಹಿಸಲು ಎಷ್ಟೇ ಪ್ರಯತ್ನಪಟ್ಟರೂ ಸಹ ಅದು ಹಠ ಹಿಡಿದು ಪಾದಯಾತ್ರೆಯಲ್ಲಿ ಭಕ್ತಾದಿಗಳನ್ನು ಹಿಂಬಾಲಿಸಿದೆ.
ಈ ಬಗ್ಗೆ ದೂರವಾಣಿ ಮುಖಾಂತರ ಶ್ವಾನದ ಮಾಲೀಕ ಶಂಕ್ರಯ್ಯ ಮಠಪತಿ ಮಾತನಾಡಿ, ಕಳೆದ 35 ವರ್ಷಗಳಿಂದ ನಾನು ಪಾದಯಾತ್ರೆಗೆ ಹೋಗುತ್ತಿದ್ದೇನೆ. ಮಾರ್ಗ ಮಧ್ಯದಲ್ಲಿ ಇಂತಹ ಘಟನೆಗಳನ್ನು ನಾನು ಎಲ್ಲಿಯೂ ನೋಡಿಲ್ಲ. ಆದರೆ ನಮ್ಮ ಸಾಕು ನಾಯಿ, ಪ್ರತಿ ವರ್ಷ ಪಾದಯಾತ್ರೆ ಹೋಗುವ ಸಂದರ್ಭದಲ್ಲಿ ಬೆನ್ನು ಹತ್ತುತ್ತಿತ್ತು. ಆದರೆ ಇದನ್ನು ಮನೆಯಲ್ಲೇ ಕಟ್ಟಿಹಾಕಿ ನಾವು ಪಾದಯಾತ್ರೆಗೆ ತೆರಳುತ್ತಿದ್ದೆವು. ಆದರೆ ಈ ವರ್ಷ ಇದು ತೀವ್ರವಾಗಿ ಪ್ರತಿರೋಧವೊಡ್ಡಿದ ಹಿನ್ನೆಲೆ ನಮ್ಮ ಜತೆ ಕರೆದುಕೊಂಡು ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ದೇವಸ್ಥಾನದ ಆಡಳಿತ ಮಂಡಳಿ ಅವಕಾಶ ಕೊಟ್ಟರೆ ದೇವರ ದರ್ಶನ ಮಾಡಿಸಲಾಗುವುದು. ಇದಕ್ಕೆ ಆಡಳಿತ ಮಂಡಳಿ ಅವಕಾಶ ಕೊಡುವಂತೆ 'ಈಟಿವಿ ಭಾರತ' ಮುಖಾಂತರ ನಾನು ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.
ಇದನ್ನೂ ಓದಿ: ಶಿವಮೊಗ್ಗ: ಮಾರಿಕಾಂಬ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ