ಬೆಳಗಾವಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಅವರ ಅಜ್ಜಿ ನಿಂಗಮ್ಮ ಅವರು ಕನಕಪುರದ ಹಾರೋಹಳ್ಳಿಯ ದಯಾನಂದಸಾಗರ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗಿವ ಜಾವ ನಿಧನರಾಗಿದ್ದಾರೆ.
ನಿಂಗಮ್ಮ ಅವರಿಗೆ (106) ವರ್ಷಗಳಾಗಿದ್ದವು. ಅವರ ಅಂತ್ಯಕ್ರಿಯೆ ಕನಕಪುರದ ಸಾತನೂರಿನ ದೊಡ್ಡಾಲಹಳ್ಳಿಯಲ್ಲಿ ಶುಕ್ರವಾರ ಸಂಜೆ 4.30ಕ್ಕೆ ನಡೆಯಲಿದೆ.
ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರದ ಕಲಾಪದಲ್ಲಿ ಭಾಗವಹಿಸುವುದನ್ನು ಮೊಟಕುಗೊಳಿಸಿ, ಬೆಳಗಾವಿಯಿಂದ 12 ಗಂಟೆ ವಿಮಾನದ ಮೂಲಕ ಬೆಂಗಳೂರಿಗೆ ಬಂದಿಳಿದು ನಂತರ ಅಲ್ಲಿಂದ ದೊಡ್ಡಾಲಹಳ್ಳಿಗೆ ತೆರಳಿ, ಅಜ್ಜಿಯವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಂದು ಬೆಳಗಾವಿ ಅಧಿವೇಶನದಲ್ಲಿ ನಡೆಯುವ ಅತಿವೃಷ್ಟಿ ಸಂಬಂಧದ ಚರ್ಚೆಯಲ್ಲಿ ಹಾಗೂ ಸಿಎಂ ಉತ್ತರ ನೀಡುವ ಸಂದರ್ಭ ಶಿವಕುಮಾರ್ ಉಪಸ್ಥಿತರಿರಬೇಕಿತ್ತು. ಅಲ್ಲದೆ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ರಕ್ಷಾ ರಾಮಯ್ಯ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಬೆಳಗಾವಿ ಚಲೋ ಪಾಲ್ಗೊಳ್ಳಬೇಕಿತ್ತು. ಆದರೆ, ಅಜ್ಜಿ ವಿಯೋಗ ಆಗಿರುವ ಹಿನ್ನೆಲೆ ಶಿವಕುಮಾರ್ ಅವರು ಊರಿನತ್ತ ಪ್ರಯಾಣ ಬೆಳೆಸಿದ್ದಾರೆ.