ಅಥಣಿ : ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಸಚಿವ ಪ್ರಭು ಚೌಹಾಣ್ ಹೇಳಿದರು. ತಾಲೂಕಿನಲ್ಲಿ ಕೋಕಟನೂರ ಗ್ರಾಮದಲ್ಲಿ ಪಶು ಮಹಾವಿದ್ಯಾಲಯ ಕಾಮಗಾರಿ ಪರಿಶೀಲನೆ ನಡೆಸಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರವಾಗಿ 50 ವರ್ಷಗಳಿಂದ ತಂಟೆ, ತಕರಾರು ನಡೀತಿದೆ.
ಕನ್ನಡ ತಾಯಿ ರಕ್ಷಣೆ ಮಾಡುವುದಕ್ಕೆ ನಾವು ಸಿದ್ಧರಾಗಿದ್ದೇವೆ. ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಆದ ಹಾನಿಯನ್ನು ನಾನು ಖಂಡಿಸುತ್ತೇನೆ. ಸದನದಲ್ಲಿ ಈ ಬಗ್ಗೆ ವಿಶೇಷ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.
ಪಶು ವೈದ್ಯಕೀಯ ಮಹಾವಿದ್ಯಾಲಯದ ಕೋಕಟನೂರಕ್ಕೆ ಎರಡನೇ ಬಾರಿ ಭೇಟಿ ನೀಡಿದ್ದೇನೆ. ಕೊರೊನಾ ವೇಳೆ ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲದೆ ಇರುವುದರಿಂದ ಕಾಮಗಾರಿ ವಿಳಂಬವಾಗಿದೆ. ಈ ಭೇಟಿಗೆ ನಾನು 27 ಕೋಟಿ ರೂಪಾಯಿ ಮಂಜೂರು ಮಾಡಿಕೊಂಡು ಬರಲಾಗಿದೆ.
ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಬಿಲ್ ಬಿಡುಗಡೆ ಮಾಡಿಲ್ಲ. ಸದ್ಯ ನಮ್ಮ ಸರ್ಕಾರ ಆಡಳಿತದಲ್ಲಿ ಇರುವುದರಿಂದ ಕಾಮಗಾರಿ ಆದಷ್ಟು ಬೇಗನೆ ಮುಗಿಸಿ ಉದ್ಘಾಟನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಮಹಾರಾಜರು ದೇಶದ ಸ್ವಾತಂತ್ರ್ಯ ಹೋರಾಟಗಾರರು. ಇವರಿಬ್ಬರಿಗೂ ಅವಮಾನ ಮಾಡಿರುವುದು ಖಂಡನೀಯ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸರ್ಕಾರ ಬಂಧಿಸಲಿದೆ. ಇದರಲ್ಲಿ ರಾಜಕೀಯ ಕುತಂತ್ರ ಅಡಗಿದೆ ಎಂದು ಲಕ್ಷ್ಮಣ ಸವದಿ ಹೇಳಿದರು. ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧನೆ ಮಾಡುವ ಕುರಿತು ಚರ್ಚೆ ನಡೆಸಲಾಗುವುದು ಎಂದು ಹೇಳಿದರು.