ಬೆಳಗಾವಿ: ಕೊರೊನಾ ನಿಯಂತ್ರಿಸಲು ಶಾಲಾ-ಕಾಲೇಜು ತೆರೆಯದೇ ಸರ್ಕಾರ ಆನ್ಲೈನ್ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಬಡತನದ ಸಂದಿಗ್ಧ ಪರಿಸ್ಥಿತಿಯಲ್ಲಿ ದೇವದಾಸಿ ಮಹಿಳೆ ತನ್ನ ಮಾರುವ ಮೂಲಕ ಮಗಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟಿದ್ದಾಳೆ.
ನಗರದ ಕ್ಲಬ್ ರಸ್ತೆಯಲ್ಲಿ ರೈಲ್ವೆ ಇಲಾಖೆಗೆ ಸೇರಿದ ಶೆಡ್ನಲ್ಲಿ ವಾಸವಿರುವ ಸರೋಜಿನಿ ಬೇವಿನಕಟ್ಟಿ ಅವರು ಕಿವಿಯೋಲೆ ಮಾರಿದ ದೇವದಾಸಿ. ಮೂಲತಃ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದ ಸರೋಜಿನಿ ಕಳೆದ 30 ವರ್ಷಗಳಿಂದ ಬೆಳಗಾವಿಯಲ್ಲಿ ನೆಲೆಸಿದ್ದಾಳೆ.
ದ್ವಿತೀಯ ಪಿಯು ವ್ಯಾಸಂಗ ಮಾಡಿರುವ ಪುತ್ರ ಬಾಬು, ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದಾನೆ. ಮನೆ ಮನೆಗೆ ತೆರಳಿ ಕೆಲಸ ಮಾಡುವ ಮೂಲಕ ಸರೋಜಿನಿಯು ಕುಟುಂಬವನ್ನು ಸಲಹುತ್ತಿದ್ದಾಳೆ. ಆದರೆ, ಕೊರೊನಾ ಪರಿಣಾಮ ಕೆಲಸ ಕಳೆದುಕೊಂಡು ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ.
ಅವರ ಪುತ್ರಿ ರೇಣುಕಾ ಬೇವಿನಕಟ್ಟಿ ಸರ್ದಾರ್ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಆಕೆಯ ಶಿಕ್ಷಣಕ್ಕಾಗಿ ಶಿಕ್ಷಕರ ಸಲಹೆ ಹಾಗೂ ಮಗಳ ಒತ್ತಾಯದ ಮೇರೆಗೆ ತಾಯಿಯು ಕಿವಿಯೋಲೆ ಮಾರಿ ಪುತ್ರಿಗೆ ಮೊಬೈಲ್ ಕೊಡಿಸಿದ್ದಾರೆ. ಇದೀಗ ರೇಣುಕಾ ಚಂದನ ವಾಹಿನಿಯಲ್ಲಿ ಬರುವ ತರಗತಿಗಳನ್ನು ಮೊಬೈಲ್ನಲ್ಲಿ ವೀಕ್ಷಿಸಿ ಕಲಿಯುತ್ತಿದ್ದಾಳೆ.
'ಈಟಿವಿ ಭಾರತ'ದೊಂದಿಗೆ ಮಾತನಾಡಿರ ಸರೋಜಿನಿ, ನಾನು ದೇವದಾಸಿ ಮಹಿಳೆ. ಕುಟುಂಬ ಜವಾಬ್ದಾರಿ ನನ್ನ ಮೇಲಿದೆ. ಕೊರೊನಾ ಪರಿಣಾಮ ಕೆಲಸ ಇಲ್ಲದೇ ಸಂಕಷ್ಟ ಎದುರಾಗಿದೆ. ಸವದತ್ತಿಯ ರೇಣುಕಾದೇವಿ ಮಂದಿರವೂ ಲಾಕ್ ಆಗಿದ್ದು, ಹಣ ಸಂಪಾದನೆ ಸಾಧ್ಯವಾಗುತ್ತಿಲ್ಲ. ಮಗಳ ಕಲಿಕೆಗಾಗಿ ಕಿವಿಯೋಲೆ ಮಾರಿ ಪುತ್ರಿಯನ್ನು ಓದಿಸುತ್ತಿದ್ದೇನೆ. ಆಕೆಯ ಶಿಕ್ಷಣಕ್ಕೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಸಹಕಾರ ನೀಡಬೇಕೆಂದು ಕೋರಿದರು.