ಬೆಳಗಾವಿ: ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪಿಆರ್‌ಒ (ಪೋಲಿಂಗ್ ರಿಟರ್ನಿಂಗ್ ಆಫೀಸರ್) ಬಳಿ ಲೋಡೆಡ್ ಪಿಸ್ತೂಲ್ ಪತ್ತೆಯಾಗಿರುವ ಸಂಬಂಧಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದ್ದು, ಸೂಕ್ತಕ್ರಮ ಕೈಗೊಳ್ಳಲಿದ್ದಾರೆ ಎಂದು ಡಿಸಿಪಿ ವಿಕ್ರಮ್ ಆಮ್ಟೆ ತಿಳಿಸಿದ್ದಾರೆ.
ತಾಲೂಕಿನ ವೀರನಕೊಪ್ಪ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮಗೆ ಸಂಬಂಧಿಸಿದ ವಸ್ತುಗಳನ್ನು ತೆಗೆದುಕೊಂಡು ಮತಗಟ್ಟೆಗೆ ಬರುತ್ತಾರೆ. ಈ ವೇಳೆ ಇಲಾಖೆ ಪೊಲೀಸರು ದೇಸೂರ ಗ್ರಾಮಕ್ಕೆ ಭೇಟಿ ನೀಡಿ ಚುನಾವಣೆ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿರುವ ಸಂದರ್ಭದಲ್ಲಿ ಪಿಆರ್‌ಒ ಆಗಿದ್ದ ಸುಲೇಮಾನ್ ಸನದಿ ಬಳಿ ಲೋಡೆಡ್ ಪಿಸ್ತೂಲ್ ಪತ್ತೆಯಾಗಿದೆ. ಅವರು ಪಿಸ್ತೂಲ್ ಇಟ್ಟುಕೊಂಡಿರುವ ಕುರಿತು ಈಗಾಗಲೇ ಬೆಳಗಾವಿ ಉಪವಿಭಾಗಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇವೆ. ಈ ಬಗ್ಗೆ ಅವರೇ ಸೂಕ್ತಕ್ರಮ ಕೈಗೊಳ್ಳಲಿದ್ದಾರೆ.
ಸುಲೇಮಾನ್ ಸನದಿ ಪಿಸ್ತೂಲ್ ಲೈಸೆನ್ಸ್ ಇದ್ದು, ಅವರು ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರು ಪಾಲಿಕೆ ವ್ಯಾಪ್ತಿಯಲ್ಲಿ ಇರುವುದರಿಂದ ಅವರಿಂದ ಪಿಸ್ತೂಲ್ ವಶಕ್ಕೆ ಪಡೆದುಕೊಂಡಿಲ್ಲ. ಅವರು ಚುನಾವಣೆ ಅಧಿಕಾರಿ ಮತ್ತು ಪಿಆಒ ಆಗಿರುವುದರಿಂದ ವೆಪನ್ ಇಟ್ಟುಕೊಂಡಿದ್ದು ತಪ್ಪು. ಹೀಗಾಗಿ ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ವರದಿ ಸಲ್ಲಿಸಲಾಗಿದೆ. ವರದಿ ಆಧಾರದ ಮೇಲೆ ಸೂಕ್ತಕ್ರಮ ಜರುಗಿಸಲಾಗುವುದು ಎಂದರು.
ಓದಿ:ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿ ಬಳಿ ಲೋಡೆಡ್ ಪಿಸ್ತೂಲ್ ಪತ್ತೆ!
ಮಹಾನಗರ ಪೊಲೀಸ ಆಯುಕ್ತರ ವ್ಯಾಪ್ತಿಯಲ್ಲಿ 55 ಗ್ರಾಮ ಪಂಚಾಯಿತಿಗಳು ಬರುತ್ತವೆ. ಒಟ್ಟು 285 ಮತಗಟ್ಟೆಗಳಿದ್ದು, 105 ಅತಿಸೂಕ್ಷ್ಮ ಮತಗಟ್ಟೆಗಳಿವೆ. ಹೀಗಾಗಿ ಅಹಿತಕರ ಘಟನೆಗಳು ಸಂಭವಿಸದಂತೆ ಸೂಕ್ತ ಪೊಲೀಸ್ ಬಂದೂಬಸ್ತ್ ನಿಯೋಜನೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅತಿಸೂಕ್ಷ್ಮ ಮತಗಟ್ಟೆಗಳಿಗೆ ಹಿರಿಯ ಪೊಲೀಸ್ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಜನರು ಕೂಡ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಮತ ಚಲಾಯಿಸಲು ಆಗಮಿಸುತ್ತಿದ್ದಾರೆ ಎಂದರು.