ರಾಯಚೂರು: ಮಹಾರಾಷ್ಟ್ರ ಮುಖ್ಯಮಂತ್ರಿ ಪದೇ ಪದೇ ಬೆಳಗಾವಿ ವಿಚಾರವನ್ನು ಕೆದಕುತ್ತಿರುವುದನ್ನು ಡಿಸಿಎಂ ಲಕ್ಷ್ಮಣ್ ಸವದಿ ಖಂಡಿಸಿದ್ದಾರೆ.
ಓದಿ: ನಾವು ಮುಂಬೈ ಕರ್ನಾಟಕದವರು, ಮುಂಬೈ ನಮ್ಮದು: ಮಹಾ ಸಿಎಂಗೆ ಡಿಸಿಎಂ ಸವದಿ ತಿರುಗೇಟು
ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸಿಎಂ ಪದೇ ಪದೇ ಬೆಳಗಾವಿ ಬಗ್ಗೆ ಮಾತನಾಡುತ್ತಿದ್ದಾರೆ. ಈಗಾಗಲೇ ನೀಡಿರುವ ಮಹಾಜನ್ ತೀರ್ಪು ಒಪ್ಪಿಕೊಳ್ಳಲಾಗಿದೆ. ಆದರೂ ಸಹ ಅವರು ಗಡಿ ವಿವಾದವನ್ನು ಸೃಷ್ಟಿಸುತ್ತಿದ್ದಾರೆ ಎಂದರು.
ಈಗ ಮಹಾರಾಷ್ಟ್ರದ ಏಕೀಕರಣದವರು ಸುಪ್ರೀಂ ಕೋರ್ಟ್‌ನಲ್ಲಿ ಧಾವೆ ಹಾಕಿದ್ದಾರೆ. ಅದೂ ಕೂಡ ನಮ್ಮ ಪರವಾಗಿ ತೀರ್ಪು ಬರುವ ವಿಶ್ವಾಸ ಮತ್ತು ಭರವಸೆಯಿದೆ. ಆದರೆ ಅನಾವಶ್ಯಕವಾಗಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನ ಸಿಎಂ ಉದ್ಧವ್ ಠಾಕ್ರೆ ಮಾಡುತ್ತಿದ್ದಾರೆ ಎಂದು ಸವದಿ ಹೇಳಿದ್ರು.
ಠಾಕ್ರೆ ಪ್ರಬುದ್ಧ ರಾಜಕಾರಣಿಯಂತೆ ಮಾತನಾಡಬೇಕು. ಅವರ ಸರ್ಕಾರ ಗೊಂದಲದಲ್ಲಿದ್ದು, ಒಂದು ಮನೆ ಮೂರು ಬಾಗಿಲು ಅನ್ನೋ ರೀತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.