ಅಥಣಿ(ಬೆಳಗಾವಿ) : ಕಳೆದ ಜೂನ್ 28ರಂದು ತಾಲೂಕಿನ ಹಲ್ಯಾಳ ಗ್ರಾಮದ ಒಂದೇ ಕುಟುಂಬದ ನಾಲ್ವರು ಸಹೋದರರು ಕೃಷ್ಣಾ ನದಿಯಲ್ಲಿ ಹಾಸಿಗೆ ತೊಳೆಯಲು ಹೋಗಿ ಮೃತಪಟ್ಟಿದ್ದರು. ಮೃತರ ಕುಟುಂಬಕ್ಕೆ ಡಿಸಿಎಂ ಲಕ್ಷ್ಮಣ್ ಸವದಿ ಸಾಂತ್ವನ ಹೇಳಿದರು. ಜತೆಗೆ ವೈಯಕ್ತಿಕವಾಗಿ 2 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದಾರೆ.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಸ್ಥಳೀಯ ಶಾಸಕ ಮಹೇಶ್ ಕುಮಟಳ್ಳಿ ಜೊತೆಯಾಗಿ ಹಲ್ಯಾಳ ಗ್ರಾಮದ ಬನಸೋಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಸಚಿವ ಸವದಿ, ಈ ದುರಂತದಿಂದ ತೀವ್ರ ನೋವಾಗಿದೆ.
ಸಹೋದರರು ನದಿಯಲ್ಲಿ ಬಿದ್ದಿರುವ ವಿಷಯ ಗೊತ್ತಾಗುತ್ತಿದ್ದಂತೆ ಅವರ ಹುಡುಕಾಟಕ್ಕೆ ಎಲ್ಲ ರೀತಿಯಿಂದಲೂ ವ್ಯವಸ್ಥೆ ಮಾಡಿದ್ರೂ ಕೂಡ ಯಾರೂ ಜೀವಂತವಾಗಿ ನಮಗೆ ದೊರೆಯಲಿಲ್ಲ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ. ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಧನ ನೀಡಲು ಸ್ಥಳೀಯ ಶಾಸಕರು ಹಾಗೂ ನಾವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದರು.
ಜೊತೆಗೆ ಮೃತರ ಕುಟುಂಬಕ್ಕೆ ನಾನು ವೈಯಕ್ತಿಕವಾಗಿ 2 ಲಕ್ಷ ರೂಪಾಯಿ ನೀಡುತ್ತಿದ್ದೇನೆ. ಹಾಗೆಯೇ ಶಾಸಕ ಮಹೇಶ್ ಕುಮಟಳ್ಳಿ ಅವರು ಕೂಡ 1 ಲಕ್ಷ ರೂಪಾಯಿ ವೈಯಕ್ತಿರವಾಗಿ ನೆರವು ನೀಡಿದ್ದಾರೆ. ಅದೇ ತರಹ ತಾಲೂಕಿನ ಎಲ್ಲ ಅಧಿಕಾರಿಗಳು ನಾಲ್ಕು ಲಕ್ಷ ರೂಪಾಯಿ ಹಣ ಸಂಗ್ರಹಿಸಿ, ಕುಟುಂಬಕ್ಕೆ ನೀಡಲು ವ್ಯವಸ್ಥೆ ಮಾಡಿದ್ದಾರೆ ಎಂದರು.
ಇದನ್ನೂ ಓದಿ : ಕಲಬುರಗಿಯಲ್ಲಿ ಮತ್ತೆ ಹರಿದ ನೆತ್ತರು: ಬೈಕ್ ಅಡ್ಡಗಟ್ಟಿ ಲ್ಯಾಬ್ ಟೆಕ್ನಿಷಿಯನ್ ಬರ್ಬರ ಹತ್ಯೆ