ಬೆಳಗಾವಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಆಹಾರ ಪೂರೈಕೆ ಸಚಿವ ಉಮೇಶ್ ಕತ್ತಿ ನೇತೃತ್ವದಲ್ಲಿ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ದಿಢೀರ್ ಹಿರಿಯ ಅಧಿಕಾರಿಗಳು ಸೇರಿ ಸಭೆ ನಡೆಸಿ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆದುಕೊಂಡು ಸಲಹೆ ಸೂಚನೆ ನೀಡಿದರು.
ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಕೊರೊನಾ ಲಸಿಕೆ ಪಡೆದವರಲ್ಲಿ ಈವರೆಗೂ ಯಾರಿಗೂ ಅನಾರೋಗ್ಯ ಸಮಸ್ಯೆ ಕಂಡು ಬಂದಿಲ್ಲ. ಆದರೂ ಕೋವಿಡ್ ಸೈಡ್ ಎಫೆಕ್ಟ್ನಿಂದಲೂ ಸಾಕಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಅವರ ಸಾವು ಕೋವಿಡ್ ಮೇಲೆ ಬರುವ ಸಾಧ್ಯತೆ ಇದೆ. ಈ ಬಗ್ಗೆ ಆರೋಗ್ಯ ಇಲಾಖೆ ಗಮನಹರಿಸಬೇಕಿದೆ. ಇದಲ್ಲದೆ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಣ ವಸೂಲಿ ಆಗುತ್ತಿರುವ ಬಗ್ಗೆ ಗಮನಹರಿಸಬೇಕು ಎಂದರು.
ಬೈಲಹೊಂಗಲ ಶಾಸಕ ಮಹಾಂತೇಶ ಪಾಟೀಲ, ಪ್ರತೀ ಗ್ರಾಮ ಪಂಚಾಯತ್ಗೆ ಕೋವಿಡ್ ನಿರ್ವಹಣೆಗೆ ಕನಿಷ್ಠ ಹತ್ತು ಸಾವಿರ ಹಣ ನೀಡುವಂತೆ ಮನವಿ ಮಾಡಿಕೊಂಡರು. ಈ ವೇಳೆ ಡಿಸಿ ಪ್ರತಿಕ್ರಿಯೆ ನೀಡಿ, ಈಗಾಗಲೇ ಪ್ರತೀ ಗ್ರಾಮ ಪಂಚಾಯತ್ಗೆ ಹಣ ಬಳಸಿಕೊಳ್ಳಲು ಆದೇಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಡಿಹೆಚ್ಒ ಶಶಿಕಾಂತ ಮುನ್ನಾಳ ಮಾತನಾಡಿ, ಜಿಲ್ಲೆಯಲ್ಲಿ ಸದ್ಯ 2166 ಸಕ್ರಿಯ ಕೇಸ್ಗಳಿದ್ದು, ಆ ಪೈಕಿ 1000ಕ್ಕೂ ಹೆಚ್ಚು ಜನರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಕೋವಿಡ್ ನಿರ್ವಹಣೆಗೆ 4,146 ಬೆಡ್ಗಳಿದ್ದು, 1,909 ಮೀಸಲು ಇಡಲಾಗಿದೆ. 1292 ಚಿಕಿತ್ಸೆಗೆ ಖಾಲಿ ಬೆಡ್ಗಳಿದ್ದು, ಪ್ರತೀ ತಾಲೂಕಿನಲ್ಲೂ 270 ಬೆಡ್ಗಳನ್ನು ಮೀಸಲು ಇಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ ಎಂದರು.