ಬೆಳಗಾವಿ: ಮಹಾಮಾರಿ ಕೊರೊನಾ ನಿಯಂತ್ರಿಸಲು ದೇಶದಲ್ಲಿ ಹೊಸ ಭರವಸೆ ಮೂಡಿಸಿರುವ ದೇಸಿ ವ್ಯಾಕ್ಸಿನ್ 'ಕೋವ್ಯಾಕ್ಸಿನ್' ಮೂರನೇ ಟ್ರಯಲ್ ಅಂತಿಮ ಘಟಕ್ಕೆ ತಲುಪಿದೆ. ಮೂರನೇ ಟ್ರಯಲ್ ವೇಳೆ ಈವರೆಗೆ 780 ಜನರು ವ್ಯಾಕ್ಸಿನ್ ಪಡೆದಿದ್ದು, ಯಾವೊಬ್ಬರಿಗೂ ಸೈಡ್ ಎಫೆಕ್ಟ್ ಕಾಣಿಸಿಕೊಂಡಿಲ್ಲ. ನಾಲ್ಕೈದು ದಿನಗಳಲ್ಲಿ ಥರ್ಡ್ ಟ್ರಯಲ್ ಪೂರ್ಣಗೊಳ್ಳಲಿದ್ದು, ಹೊಸ ವರ್ಷದ ಆರಂಭದಲ್ಲಿ ಕೋವ್ಯಾಕ್ಸಿನ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಭಾರತ್ ಬಯೋಟೆಕ್ ಸಂಸ್ಥೆ ಅನ್ವೇಷಿಸಿರುವ ಕೋವ್ಯಾಕ್ಸಿನ್ ಟ್ರಯಲ್ ದೇಶದ 12 ಆಸ್ಪತ್ರೆಗಳಲ್ಲಿ ನಡೆಯುತ್ತಿದೆ. ಬೆಳಗಾವಿಯ ಜೀವನ ರೇಖಾ ಆಸ್ಪತ್ರೆ ಕೂಡ ಟ್ರಯಲ್ ನಡೆಸಲು ಆಯ್ಕೆಯಾಗಿತ್ತು. ಮೊದಲ ಸುತ್ತಿನಲ್ಲಿ ನಾಲ್ವರಿಗೆ, ಎರಡನೇ ಸುತ್ತಿನಲ್ಲಿ ಐವತ್ತು ಜನರಿಗೆ ಹಾಗೂ ಮೂರನೇ ಸುತ್ತಿನಲ್ಲಿ 780 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ತೃತೀಯ ಹಂತಕ್ಕೆ ಭಾರತ್ ಬಯೋಟೆಕ್ ಸಂಸ್ಥೆಯು ಜೀವನರೇಖಾ ಆಸ್ಪತ್ರೆಗೆ ಒಂದು ಸಾವಿರ ಲಸಿಕೆ ನೀಡಿದೆ.
ಕಳೆದ 10 ದಿನಗಳಿಂದ ಇಲ್ಲಿನ ಜೀವನರೇಖಾ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಮೂರನೇ ಸುತ್ತಿನ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಇನ್ನೂ ನಾಲ್ಕು ದಿನಗಳ ಕಾಲ ವ್ಯಾಕ್ಸಿನ್ ಹಾಕಲಾಗುತ್ತಿದೆ. ದಿನಕ್ಕೆ ಸರಾಸರಿ 80 ಜನರಿಗೆ 18 ವರ್ಷ ಮೇಲ್ಪಟ್ಟ ಎಲ್ಲ ವರ್ಗದ ಜನರು ಕೋವ್ಯಾಕ್ಸಿನ್ ಪಡೆದಿದ್ದಾರೆ. ವಿಶೇಷ ಅಂದ್ರೆ ಒಬ್ಬರಲ್ಲೂ ಅಡ್ಡ ಪರಿಣಾಮ ಕಾಣಿಸಿಕೊಂಡಿಲ್ಲ. ಅಲ್ಲದೇ ಮೊದಲನೇ ಹಾಗೂ ದ್ವಿತೀಯ ಸುತ್ತಿನಲ್ಲಿಯೂ ಅಡ್ಡಪರಿಣಾಮ ಆಗಿಲ್ಲ. ಹೀಗಾಗಿ ದೇಶಿಯವಾಗಿ ಅನ್ವೇಷಣೆಗೊಂಡ ಕೋವ್ಯಾಕ್ಸಿನ್ ಮಹಾಮಾರಿ ಕೊರೊನಾ ನಿಯಂತ್ರಿಸಲು ಸಮರ್ಥವಾಗಿದೆ.
ಗಾಳಿ ಸುದ್ದಿಗೆ ಕಿವಿಗೊಡಬೇಡಿ
ಕೊರೊನಾ ನಿಯಂತ್ರಿಸಲು ದೇಶದ ಎಲ್ಲೆಡೆ ಕೋವ್ಯಾಕ್ಸಿನ್ ಟ್ರಯಲ್ ನಡೆಯುತ್ತಿದೆ. ಆದರೆ, ಟ್ರೈಯಲ್ ಹಂತದ ಲಸಿಕೆ ಪಡೆದರು ಅಡ್ಡಪರಿಣಾಮ ಬೀರುತ್ತದೆ ಎಂದು ಕೆಲವರು ಗಾಳಿಸುದ್ದಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ಯಾರೊಬ್ಬರೂ ಕಿವಿಗೊಡಬಾರದು. ಟ್ರಯಲ್ ಹಂತದಲ್ಲಿರುವ ಕೋವ್ಯಾಕ್ಸಿನ್ ಒಬ್ಬರ ಮೇಲೂ ಅಡ್ಡಪರಿಣಾಮ ಬೀರಿಲ್ಲ. ದೇಶದ 12 ಕಡೆಗಳಲ್ಲಿ ಕೋವ್ಯಾಕ್ಸಿನ್ ಟ್ರಯಲ್ ನಡೆಯುತ್ತಿದೆ. ಎಲ್ಲಿಯೂ ಸಮಸ್ಯೆ ಆಗಿಲ್ಲ. ವಾಲೆಂಟಿಯರ್ ಆಗಿ ಜನರು ಪ್ರಾಯೋಗಿಕ ಹಂತದ ಲಸಿಕೆ ಹಾಕಿಸಿಕೊಳ್ಳಬಹುದು. ಕೋವ್ಯಾಕ್ಸಿನ್ ಬಗ್ಗೆ ಯಾವುದೇ ಅನುಮಾನ ಬೇಡ. ವ್ಯಾಕ್ಸಿನ್ ಸಕ್ಸಸ್ ಮಾಡಲು ದೇಶದ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಜೀವನರೇಖಾ ಆಸ್ಪತ್ರೆಯ ಮುಖ್ಯಸ್ಥ ಡಾ. ಅಮಿತ್ ಭಾಟೆ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತಷ್ಟು ಲಸಿಕೆಗೆ ಬೇಡಿಕೆ
ಕೋವ್ಯಾಕ್ಸಿನ್ ತೃತೀಯ ಹಂತದ ಟ್ರಯಲ್‍ಗೆ ಎಲ್ಲ ಕೇಂದ್ರಗಳಿಗೆ ಭಾರತ ಬಯೋಟೆಕ್ ಸಂಸ್ಥೆ ಒಂದು ಸಾವಿರ ಲಸಿಕೆಯನ್ನು ನೀಡಿತ್ತು. ಬೆಳಗಾವಿಯ ಜೀವನ ರೇಖಾ ಆಸ್ಪತ್ರೆಯಲ್ಲಿ ತೃತಿಯ ಹಂತದ ಟ್ರಯಲ್ ವೇಗವಾಗಿ ನಡೆಯುತ್ತಿದ್ದು, ಮತ್ತಷ್ಟು ವ್ಯಾಕ್ಸಿನ್ ನೀಡುವಂತೆ ಮನವಿ ಮಾಡಿಕೊಂಡಿದ್ದೇವೆ. ಈ ಬಗ್ಗೆ ಭಾರತ್ ಬಯೋಟೆಕ್ ಕೂಡ ಸಕಾರಾತ್ಮವಾಗಿ ಸ್ಪಂದಿಸಿದೆ.
25 ಸಾವಿರ ಜನರಿಗೆ ವ್ಯಾಕ್ಸಿನ್
ಭಾರತ ಬಯೋಟೆಕ್ ಸಂಸ್ಥೆಯು ಕೋವ್ಯಾಕ್ಸಿನ್ ಲಸಿಕೆ ಮೊದಲ ಹಾಗೂ ದ್ವಿತೀಯ ಸುತ್ತಿನ ಪ್ರಾಯೋಗಿಕ ಪರೀಕ್ಷೆಗೆ ದೇಶದ 12 ಕೇಂದ್ರಗಳನ್ನು ಆಯ್ಕೆ ಮಾಡಿತ್ತು. ಮೊದಲ ಸುತ್ತಿನ ಪ್ರಾಯೋಗಿಕ ಪರೀಕ್ಷೆ ದೇಶದ 350 ಜನರು ಹಾಗೂ ಎರಡನೇ ಸುತ್ತಿನಲ್ಲಿ 750 ಜನರ ಮೇಲೆ ಪ್ರಯೋಗ ಮಾಡಲಾಗಿತ್ತು. ಎರಡೂ ಸುತ್ತಿನಲ್ಲಿ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಮೂರನೇ ಸುತ್ತಿಗೆ ಪ್ರಾಯೋಗಿಕ ಕೇಂದ್ರಗಳನ್ನು ವಿಸ್ತರಣೆ ಮಾಡಲಾಗಿದೆ. 12 ಸಂಸ್ಥೆಯ ಜತೆಗೆ ಮೂರನೇ ಸುತ್ತಿನ ಪ್ರಯೋಗಕ್ಕೆ ದೇಶದ 25 ಕೇಂದ್ರಗಳಲ್ಲಿ ನಡೆಯುತ್ತಿದೆ. ಮೂರನೇ ಸುತ್ತಿನ ಪ್ರಾಯೋಗಿಕ ಪರೀಕ್ಷೆ 25 ಸಾವಿರ ಜನರ ಮೇಲೆ ನಡೆಯುತ್ತಿದೆ. ಈವರೆಗೆ ವ್ಯಾಕ್ಸಿನ್ ಪಡೆದ ಯಾರಲ್ಲೂ ಅಡ್ಡ ಪರಿಣಾಮ ಬೀರಿಲ್ಲ ಎಂದು ಡಾ.ಅಮಿತ್ ಭಾಟೆ ತಿಳಿಸಿದ್ದಾರೆ.