ಬೆಳಗಾವಿ: ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಮಹಾಮಾರಿ ಕೊರೊನಾ ವೈರಾಣು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೂ ಮತ್ತೆ ಲಗ್ಗೆ ಇಟ್ಟಿದೆ.
ಓದಿ: ಹಿಂಡಲಗಾ ಜೈಲಿನ ಮೇಲೆ ದಿಢೀರ್ ಪೊಲೀಸರ ದಾಳಿ: ಮೊಬೈಲ್ ಫೋನ್ ಜಪ್ತಿ
ಕೆಲ ದಿನಗಳ ಹಿಂದಷ್ಟೇ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಇಬ್ಬರನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪೆರೋಲ್ ಮೇಲೆ ಹೋಗಿ ಮರಳಿದ್ದ ಕೈದಿ ಹಾಗೂ ಓರ್ವ ವಿಚಾರಣಾಧೀನ ಕೈದಿಗೆ ಸೋಂಕು ದೃಢಪಟ್ಟಿದೆ. ಕ್ವಾರಂಟೈನ್ ಸೆಲ್ ನಲ್ಲಿದ್ದ ಇಬ್ಬರನ್ನು ವರದಿ ಬಂದ ತಕ್ಷಣವೇ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಕಳೆದ ವರ್ಷ ಕೂಡ ಜೈಲಿನ 37 ಕೈದಿಗಳಿಗೆ ಸೋಂಕು ದೃಢಪಟ್ಟಿತ್ತು. ಇದೀಗ ಮತ್ತೆ ಇಬ್ಬರು ಕೈದಿಗಳಿಗೆ ಸೋಂಕು ಕಾಣಿಸಿಕೊಂಡಿದೆ. ಒಂದು ಸಾವಿರ ಕೈದಿಗಳ ಸಾಮರ್ಥ್ಯ ಹೊಂದಿರುವ ಜೈಲಿನಲ್ಲಿ ಸದ್ಯ 861 ಕೈದಿಗಳಿದ್ದಾರೆ. ಶಿಕ್ಷೆಗೊಳಗಾದವರು ಹಾಗೂ ವಿಚಾರಣಾಧೀನ ಕೈದಿಗಳು ಇದರಲ್ಲಿದ್ದಾರೆ.
ಕೋವಿಡ್ ನೆಗೆಟಿವ್ ವರದಿ ಕಡ್ಡಾಯ:
ಲಾಕ್ಡೌನ್ ಹಿನ್ನೆಲೆಯಲ್ಲಿ ಅಪರಾಧ ಕೃತ್ಯಗಳು ಜಿಲ್ಲೆಯಲ್ಲಿ ತುಸು ಕಡಿಮೆಯಾಗಿವೆ. ಹೀಗಾಗಿ ವಿಚಾರಣಾಧೀನ ಕೈದಿಗಳ ಪ್ರವೇಶದ ಪ್ರಮಾಣವೂ ಕಡಿಮೆಯಾಗಿದೆ. ಆದರೂ ಹೊಸದಾಗಿ ಜೈಲಿಗೆ ಬರುವ ಕೈದಿಗಳಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ರ್ಯಾಪಿಡ್ ಟೆಸ್ಟ್ ಆದರೆ ತಕ್ಷಣವೇ ವರದಿ ಬರುತ್ತದೆ. ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಟ್ಟರೆ ಅಂಥವರ ವರದಿ ತುಸು ತಡವಾಗುತ್ತದೆ.
ಹೀಗಾಗಿ ಜೈಲಿನಲ್ಲಿ ಕ್ವಾರಂಟೈನ್ ಸೆಲ್ ತೆರೆಯಲಾಗಿದೆ. ವರದಿ ಬರುವರೆಗೆ ಇಂಥ ಕೈದಿಗಳನ್ನು ಕ್ವಾರಂಟೈನ್ ಸೆಲ್ ನಲ್ಲಿ ಇರಿಸಲಾಗುತ್ತಿದೆ. ವರದಿ ಬಂದರೂ 14 ದಿನಗಳ ಕ್ವಾರಂಟೈನ್ ಅವಧಿ ಮುಗಿಯುವ ತನಕ ಕ್ವಾರಂಟೈನ್ ಸೆಲ್ ನಲ್ಲಿ ಇರಿಸಿ ನಂತರ ಸಾಮಾನ್ಯ ಸೆಲ್ ಗೆ ರವಾನೆ ಮಾಡಲಾಗುತ್ತಿದೆ. ಕ್ವಾರಂಟೈನ್ ಸೆಲ್ ಮಾಡಿದಕ್ಕೆ ದೊಡ್ಡ ಅವಘಡ ತಪ್ಪಿದೆ. ಇಲ್ಲವಾದರೆ ಈ ಇಬ್ಬರಿಂದ ಇತರ ಕೈದಿಗಳಿಗೂ ಸೋಂಕು ಹರಡುವ ಆತಂಕ ಇತ್ತು. ಕೊರೊನಾ ವಿಚಾರದಲ್ಲಿ ಜೈಲಿನಲ್ಲಿ ಬಿಗಿ ಕ್ರಮ ವಹಿಸಲಾಗಿದೆ. ಹೀಗಾಗಿ ಇತರ ಜೈಲಿಗಿಂತ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಕೈದಿಗಳು ಸೇಫ್ ಆಗಿದ್ದಾರೆ.
ವಾರಕ್ಕೊಮ್ಮೆ ಆರೋಗ್ಯ ತಪಾಸಣೆ:
ಮಾಜಿ ಸಚಿವ ವಿನಯ್ ಕುಲಕರ್ಣಿ, ಭೂಗತ ಪಾತಕಿ ಬನ್ನಂಜೆ ರಾಜಾ, ವಿಕೃತಕಾಮಿ ಉಮೇಶ್ ರೆಡ್ಡಿ, ದಂಡುಪಾಳ್ಯ ಗ್ಯಾಂಗ್ ಸದಸ್ಯರು ಹಾಗೂ ಭೂಗತ ಪಾತಕಿ ರವಿ ಪೂಜಾರಿ ಸಹಚರರು ಜೈಲಿನಲ್ಲಿದ್ದಾರೆ. ಕೊರೊನಾ ಅಟ್ಟಹಾಸ ಮೆರೆಯುತ್ತಿರುವ ಕಾರಣ ಜೈಲಿನಲ್ಲಿ ವಾರಕ್ಕೊಮ್ಮೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಈ ಮೊದಲು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿತ್ತು. ಇದೀಗ ಮುನ್ನೆಚ್ಚರಿಕೆ ಕ್ರಮವಾಗಿ ವಾರಕ್ಕೊಮ್ಮೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ಜೈಲಿನ ಸಿಬ್ಬಂದಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.