ಬೆಳಗಾವಿ: ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೇ ಸುರೇಶ್ ಅಂಗಡಿ ಅವರು ವಿಧಿವಶರಾದ ಹಿನ್ನೆಲೆ, ವಿಶ್ವೇಶ್ವರಯ್ಯ ನಗರಕ್ಕೆ ಭೇಟಿ ನೀಡಿದ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ದಂಪತಿ ಅಂಗಡಿಯವರ ತಾಯಿ ಸೋಮವ್ವಗೆ ಸಾಂತ್ವನ ಹೇಳಿದರು.
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ತಾಯಿಗೆ ಪ್ರಭಾಕರ ಕೋರೆ ದಂಪತಿ ಸಾಂತ್ವನ ಹೇಳಿದರು. ಮಗನ ಕಳೆದುಕೊಂಡು ನಾ ಹೆಂಗ್ ಬದುಕಲಿ ಯಪ್ಪಾ ಎಂದು ಪ್ರಭಾಕರ್ ಕೋರೆ ಬಳಿ ಅಂಗಡಿಯವರ ತಾಯಿ ಸೋಮವ್ವ ಕಣ್ಣೀರು ಹಾಕಿದರು. ನಿನ್ನ ಮಗ ಬೆಳಗಾವಿಗಷ್ಟೇ ಅಲ್ಲ ಜಗತ್ತಿಗೆ ಪ್ರಸಿದ್ಧಿ ಪಡೆದಿದ್ದ. ಸಮಾಧಾನ ಮಾಡಿಕೊಳ್ಳಿ ಎಂದು ಸಾಂತ್ವನ ಹೇಳಿದರು. ಬಳಿಕ ಕೋರೆ ಅವರೇ ಸೋಮವ್ವ ಅವರಿಗೆ ಚಹಾ ಕುಡಿಸಿದರು.
ಕೋರೆ ಭಾವುಕ:
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಭಾಕರ ಕೋರೆ, ಗೆಳೆಯನನ್ನು ನೆನೆದು ಭಾವುಕರಾದರು. ಸುರೇಶ್ ಅಂಗಡಿ ನಿಧನದಿಂದ ದೇಶಕ್ಕೆ, ರಾಜ್ಯಕ್ಕೆ ದೊಡ್ಡ ಹಾನಿಯಾಗಿದೆ. ಸುರೇಶ್ ಅಂಗಡಿ ವ್ಯಕ್ತಿತ್ವ ಬೆಳಗಾವಿ ಜನರಿಗೆ ಬಹುತೇಕ ಗೊತ್ತಿರಲಿಲ್ಲ. ಅವರು ತೀರಿ ಹೋದ ಮೇಲೆ ಅವರ ವ್ಯಕ್ತಿತ್ವದ ಬಗ್ಗೆ ಗೊತ್ತಾಗುತ್ತಿದೆ. ಅಂಗಡಿ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಪಿಯೂಷ್ ಗೋಯಲ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ರಾಜ್ಯಕ್ಕೆ ಹಲವು ರೈಲ್ವೆ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವರ ತಾಯಿಯ ನೋವು ನೋಡಲು ಆಗುತ್ತಿಲ್ಲ. ಸೆಪ್ಟೆಂಬರ್ 12ರಂದು ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದೆ. ಬಳಿಕ ಐಸಿಯುಗೆ ಅವರನ್ನು ಶಿಫ್ಟ್ ಮಾಡಿದ್ದರು. ನಿನ್ನೆ ಡಿಸ್ಚಾರ್ಜ್ ಮಾಡುವ ವೇಳೆ ಹೃದಯದಲ್ಲಿ ಬ್ಲಾಕ್ ಆಗಿವೆ. ದುರ್ದೈವ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಿದರು.
ಸುರೇಶ್ ಅಂಗಡಿ ಶರಣರ ಸಂಸ್ಕೃತಿಯಲ್ಲಿ ಬೆಳೆದವರು. ಯಾವುದೇ ವ್ಯಸನಗಳಿರಲಿಲ್ಲ, ಯಾವಾಗಲೂ ಹಸನ್ಮುಖಿ. ಹಸನ್ಮುಖಿಗಳ ಆಯುಷ್ಯ ಹೆಚ್ಚಾಗುತ್ತದೆ ಎಂದು ನಂಬಿದ್ದೇವೆ. ಆದರೆ ವಿಧಿಯಾಟದಿಂದ ಅವರನ್ನು ಕಳೆದುಕೊಂಡೆವು ಎಂದು ಪ್ರಭಾಕರ ಕೋರೆ ಭಾವುಕರಾದರು.