ಬೆಳಗಾವಿ : ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣ ಸಂಬಂಧ ಉಡುಪಿಯ ತನಿಖಾಧಿಕಾರಿಗಳ ತಂಡ ಬೆಳಗಾವಿಗೆ ದೌಡಾಯಿಸಿದೆ. ನಿನ್ನೆ ರಾತ್ರಿಯೇ ಮಫ್ತಿಯಲ್ಲಿ ಬೆಳಗಾವಿಗೆ ಆಗಮಿಸಿರುವ ಪೊಲೀಸರು, ಇಂಚಿಂಚೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರು ಜನರ ಪೊಲೀಸ್ ತಂಡ ಮೃತ ಸಂತೋಷ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮೃತ ಸಂತೋಷ ಹುಟ್ಟೂರಾದ ಬೆಳಗಾವಿ ತಾಲೂಕಿನ ಬಡಸ ಗ್ರಾಮದಲ್ಲಿ ಮಫ್ತಿಯಲ್ಲಿ ಮೂವರು ಪೊಲೀಸ್ ಸಿಬ್ಬಂದಿ ರೌಂಡ್ಸ್ ಹಾಕುತ್ತಿದ್ದಾರೆ. ಸಂತೋಷ ಪಾಟೀಲ್ ಕಾಮಗಾರಿ ಮಾಡಿದ್ದ ಹಿಂಡಲಗಾ ಗ್ರಾಮಕ್ಕೆ ಮೂವರು ಪೊಲೀಸರು ಭೇಟಿ ನೀಡಿದ್ದಾರೆ. ಕಾಮಗಾರಿ ನಡೆದ ಸ್ಥಳ ಹಾಗೂ ಗ್ರಾಮಸ್ಥರಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಉಡುಪಿ ಪೊಲೀಸರು ಬೆಳಗಾವಿಯಲ್ಲಿ ಪ್ರಕರಣದ ತನಿಖೆ ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ: ಈಶ್ವರಪ್ಪ ಬಂಧನಕ್ಕಾಗಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ.. ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿ
ಬೆಳಗಾವಿ ತಾಲೂಕಿನ ಬಡಸ್ ಗ್ರಾಮದಲ್ಲಿರುವ ಸಂತೋಷ ಪಾಟೀಲ ನಿವಾಸಕ್ಕೆ ತೆರಳಿರುವ ಉಡುಪಿ ಪೊಲೀಸರು, ಸಂತೋಷ ಪಾಟೀಲ ಪತ್ನಿ ಜಯಶ್ರೀಯಿಂದ ಮಾಹಿತಿ ಪಡೆಯುತ್ತಿದ್ದಾರೆ. ಸಂತೋಷ ಆತ್ಮಹತ್ಯೆಗೂ ಮುನ್ನ ಎಷ್ಟು ಗಂಟೆಗೆ ಫೋನ್‌ನಲ್ಲಿ ಮಾತನಾಡಿದ್ರಿ? ಸಂತೋಷ ಏನು ಹೇಳಿದ್ರು? ಉಡುಪಿಗೆ ಯಾವಾಗ ಮತ್ತು ಏಕೆ ಹೋಗಿದ್ದರು? ಎಂಬ ಕುರಿತು ಸಂತೋಷ ಪತ್ನಿಯಿಂದ ಇನ್ಸ್‌ಪೆಕ್ಟರ್ ಶರಣಗೌಡ ನೇತೃತ್ವದ ತಂಡ ಮಾಹಿತಿ ಪಡೆದುಕೊಳ್ಳುತ್ತಿದೆ.