ಬೆಳಗಾವಿ: ಇಂದು ನಡೆದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ನಕಲು ಮಾಡಲು ಯತ್ನಿಸಿದ 14 ಜನರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸಿಇಎನ್ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಓರ್ವ ಮಹಿಳಾ ಅಭ್ಯರ್ಥಿ ಸೇರಿದಂತೆ 14ಜನರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇಬ್ಬರು ಅಭ್ಯರ್ಥಿಗಳು ಮತ್ತು ನಕಲು ಮಾಡಲು ಸಾಥ್ ನೀಡಿದ್ದ 12 ಜನರ ಬಂಧನವಾಗಿದೆ. ರಾಮತೀರ್ಥ ನಗರದ ಎಸ್.ಎಸ್. ಡೆಕೋರೆಟರ್ ಮತ್ತು ಇವೆಂಟ್ ಪ್ಲ್ಯಾನರ್ ಕಚೇರಿಯಲ್ಲಿ ನಕಲು ಮಾಡಲಾಗುತ್ತಿತ್ತು. ಮೊಬೈಲ್ ಮತ್ತು ಬ್ಲ್ಯುಟೂತ್ ಬಳಸಿ ಅಭ್ಯರ್ಥಿಗಳಿಗೆ ಆರೋಪಿಗಳು ಸಹಕರಿಸುತ್ತಿದ್ದರು.
ಇದನ್ನೂ ಓದಿರಿ: ನಾಳೆಯಿಂದ 1 ರಿಂದ 5ನೇ ತರಗತಿಗಳು ಆರಂಭ... ಈ ಮಾರ್ಗಸೂಚಿ ಪಾಲನೆ ಕಡ್ಡಾಯ
ಖಚಿತ ಮಾಹಿತಿ ಮೇರೆಗೆ ಕಚೇರಿ ಮೇಲೆ ದಾಳಿ ನಡೆಸಿ 12 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ 33 ಮೊಬೈಲ್, 9ಮಾಸ್ಟರ್ ಕಾರ್ಡ್, 19 ಬ್ಲ್ಯುಟೂತ್, 1ಟ್ಯಾಬ್, 1ಲ್ಯಾಪ್ ಟಾಪ್, 1ಪ್ರಿಂಟರ್, 1ಕಾರು ಮತ್ತು 3ಬೈಕ್ ಜಪ್ತಿ ಮಾಡಲಾಗಿದೆ. ವನಿತಾ ವಿದ್ಯಾಲಯದಲ್ಲಿ ಬ್ಲ್ಯುಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಮಹಿಳಾ ಅಭ್ಯರ್ಥಿಯನ್ನು ಬಂಧಿಸಲಾಗಿದೆ. ಸರ್ದಾರ್ ಪಿಯು ಕಾಲೇಜಿನಲ್ಲಿ ಓರ್ವ ಅಭ್ಯರ್ಥಿಯನ್ನೂ ಸಹ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ನಗರದ ಮಾಳಮಾರುತಿ, ಖಡೇಬಜಾರ್ ಹಾಗೂ ಕ್ಯಾಂಪ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.